ಬೆಂಗಳೂರು,ಡಿ. 27– ಕಾವೇರಿ ನೀರಿನ ಬಿಲ್ ಬಾಕಿ ಕಟ್ಟಲು ಓಟಿಎಸ್ ಪದ್ಧತಿ ಜಾರಿಗೆ ತರಲಾಗಿದೆ. ಒಂದೇ ಬಾರಿಗೆ ಬಿಲ್ ಪಾವತಿಸುವವರ ಬಿಲ್ ಮೊತ್ತದ ಸಂಪೂರ್ಣ ಬಡ್ಡಿ ಮನ್ನಾ ಮಾಡಲು ಬೆಂಗಳೂರು ಜಲ ಮಂಡಳಿ ತೀರ್ಮಾನಿಸಿದೆ. ಜಲಮಂಡಳಿಗೆ ಸರಿ ಸುಮಾರು 701 ಕೋಟಿ ರೂ. ಗಳ ಬಿಲ್ ಬಾಕಿ ಇರುವುದರಿಂದ ಸಂಪನೂಲ ಕ್ರೋಢಿಕರಣದ ಉದ್ದೇಶದಿಂದ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಈ ಯೋಜನೆ ಮೂರು ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಒಟ್ಟು 701 ಕೋಟಿ ರೂ.ಗಳ ಬಿಲ್ ಪೈಕಿ 439 ಕೋಟಿ ಅಸಲು ಹಾಗೂ 262 ಕೋಟಿ ಬಡ್ಡಿ ಮೊತ್ತ ಬಾಕಿ ಇದೆ. ಈ ಪೈಕಿ ಬಡ್ಡಿ ಮೊತ್ತ 100% ಮನ್ನಾ ಮಾಡಿ ಪಾವತಿಸುವಂತೆ ಆದೇಶ ಇಂದಿನಿಂದ ಜಾರಿಗೆ ಬರುವಂತೆ ಮೂರು ತಿಂಗಳ ಅವಧಿಗೆ ಯೋಜನೆ ಜಾರಿಯಲ್ಲಿರಲ್ಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ಉಪಯೋಗಿಸುತ್ತಿರುವ ನೀರಿನ ಬಾಕಿ ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ ಬಡ್ಡಿ ಮೊತ್ತವನ್ನು ಶೇ.100 ರಷ್ಟು ಮನ್ನಾ ಮಾಡುವ ಏಕಕಾಲಿಕ ಸೆಟಲ್‌ಮೆಂಟ್ ಯೋಜನೆ ಜಾರಿಗೆ ತರಲಾಗುತ್ತಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಗ್ರಾಹಕರಿಂದ ನೀರಿನ ಬಿಲ್ಲು ಬಾಕಿ ಉಳಿದಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಬಾಕಿಯಿರುವ ಮೊತ್ತಕ್ಕೆ ಬಡ್ಡಿ ಮೊತ್ತವು ಸಹ ಹೆಚ್ಚಾಗುತ್ತಿದೆ. ಇದು ಹಲವು ಗ್ರಾಹಕರು ಧೀರ್ಘಕಾಲದಿಂದ ನೀರಿನ ಬಿಲ್ಲನ್ನು ಪಾವತಿಸದಿರುವುದಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಫೆಬ್ರವರಿ 2025ರವರೆಗೆ ಗ್ರಾಹಕರು ಉಳಿಸಿಕೊಂಡಿರುವ ನೀರಿನ ಒಟ್ಟು ಬಾಕಿ ಮೊತ್ತವು ರೂ.701.71 ಕೋಟಿಗಳಿದ್ದು, ಸದರಿ ಮೊತ್ತದಲ್ಲಿ ಅಸಲು ಮೊತ್ತವು ರೂ.439.03 ಕೋಟಿಗಳು ಮತ್ತು ಬಾಕಿಯಿರುವ ಬಡ್ಡಿ ಮೊತ್ತವು ರೂ.262.68 ಕೋಟಿಗಳಾಗಿರುತ್ತವೆ.
ಗ್ರಾಹಕರಿಂದ ಬಾಕಿ ಇರುವ ನೀರಿನ ಬಿಲ್ ಮೊತ್ತವನ್ನು ವಸೂಲಿ ಮಾಡುವ ದೃಷ್ಟಿಯಿಂದ ದೀರ್ಘಾವಧಿಯಿಂದ ಬಾಕಿಯಿರುವ ಬಿಲ್ ಮೊತ್ತವನ್ನು ಏಕಕಾಲದಲ್ಲಿ ಪಾವತಿಸುವ ಗ್ರಾಹಕರಿಗೆ ಬಡ್ಡಿ ಮೊತ್ತವನ್ನು ಶೇಕಡಾ 100ರಷ್ಟು ಮನ್ನಾ ಮಾಡುವ ಸಲುವಾಗಿ ಏಕಕಾಲಿಕ ಸೆಟಲ್ ಮೆಂಟ್ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಜಲಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಬಾಕಿಗಳ ಪಾವತಿಗೆ ಸಂಬಂಧಿಸಿದಂತೆ ಜಾರಿಗೆ ತರಲಾಗಿದ್ದ ಏಕ ಕಾಲಿಕ ಯೋಜನೆ ಹಾಗೂ ಹೈದರಾಬಾದ್ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ನೀರಿನ ಬಾಕಿ ಮೊತ್ತವನ್ನು ತ್ವರಿತವಾಗಿ ವಸೂಲಿ ಮಾಡುವುದರ ಜೊತೆಗೆ, ಗ್ರಾಹಕರಿಗೆ ಹಣಕಾಸಿನ ತೊಂದರೆ ಆಗದಂತೆ ಸಹಾಯ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.
