ಬೆಳಗಾವಿ, ಡಿ.9- ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ಶಾಸಕರ ನಡುವೆ ಗೊಂದಲಗಳಾದ ಪ್ರಸಂಗ ನಡೆಯಿತು. ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಪ್ರಶ್ನೋತ್ತರವನ್ನು ಬದಿಗಿಟ್ಟು ನಿಲುವಳಿ ಸೂಚನೆಯಡಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ನಾವು ಮಂಡಿಸಿರುವ ನಿಲುವಳಿ ಸೂಚನೆಯಡಿ, ಉತ್ತರ ಕರ್ನಾಟಕ ಭಾಗದಲ್ಲಿ ಸಂಭವಿಸಿರುವ ನೆರೆ ಹಾವಳಿ ನಷ್ಟವನ್ನೇ ನಿಲುವಳಿ ಸೂಚನೆಯ ಅಡಿ ಪ್ರಸ್ತಾಪಿಸಿದ್ದು, ಅದರ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಈ ವೇಳೆ ಬಿಜೆಪಿಯ ಸುನಿಲ್ ಕುಮಾರ್ ಧ್ವನಿಗೂಡಿಸಿದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸರ್ಕಾರವೇ ಸಿದ್ಧವಿದೆ. ಅದನ್ನು ಅಜೆಂಡಾದಲ್ಲಿ ಸೇರ್ಪಡೆ ಮಾಡಲಾಗಿದೆ. ಸರ್ಕಾರವೇ ಚರ್ಚೆಗೆ ಸಿದ್ದ ಇರುವಾಗ ವಿರೋಧಪಕ್ಷಗಳು ಯಾವ ಕಾರಣಕ್ಕೆ ಗದ್ದಲ ಮಾಡುತ್ತಿವೆ ಎಂದು ಪ್ರಶ್ನಿಸಿದರು.
ಸಭಾಧ್ಯಕ್ಷರು ಪ್ರಶ್ನೋತ್ತರದ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ಬಿಜೆಪಿಯ ಶಾಸಕರು ಪ್ರಶ್ನೋತ್ತರವನ್ನು ಬದಿಗಿಟ್ಟು ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಪಟ್ಟು ಹಿಡಿದರು.ಈ ವೇಳೆ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಪ್ರಶ್ನೋತ್ತರಗಳನ್ನು ಬದಿಗಿಡಬಾರದು ಎಂದು ವಿರೋಧ ವ್ಯಕ್ತ ಪಡಿಸಿದರು. ಶಾಸಕರಿಗೆ ತಮ ಕ್ಷೇತ್ರದ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಪ್ರಶ್ನೋತ್ತರವನ್ನು ಬದಿಗಿಟ್ಟು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳುವುದಾದರೆ ನಮ ಅಭ್ಯಂತರ ಇಲ್ಲ ಎಂದು ಸಮಜಾಯಿಷಿ ನೀಡಿದರು.
ಶಾಸಕರ ಅಭಿಪ್ರಾಯಗಳು ಹಾಗೂ ಕೊನೆಗೆ ವಿರೋಧ ಪಕ್ಷದ ನಾಯಕರ ಸಹಮತಿಯ ಮೇರೆಗೆ ಸಭಾಧ್ಯಕ್ಷರು ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು. ಬಳಿಕ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು.
