ಬೆಂಗಳೂರು,ಡಿ.4- ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟಕ್ಕೂ ಪರಪ್ಪನ ಅಗ್ರಹಾರ ಜೈಲಿಗೂ ಸಂಬಂಧವಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದ ಅಧಿಕಾರಿಗಳು ಏಕಾಏಕಿ ನಗರದ ಪರಪ್ಪನ ಅಗ್ರಹಾರ
ಜೈಲಿಗೆ ಭೇಟಿ ನೀಡಿ ಕಾರಾಗೃಹದಲ್ಲಿರುವ ಕೆಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡುತ್ತದೆ.
ನವದೆಹಲಿಯಿಂದ ನಗರಕ್ಕೆ ಆಗಮಿಸಿರುವ ಎನ್ಐಎ ಒಂದು ತಂಡ ಪರಪ್ಪನ ಅಗ್ರಹಾರದಲ್ಲಿರುವ ಕೆಲವು ಶಂಕಿತ ಉಗ್ರರು ಹಾಗೂ ರೌಡಿ ಶೀಟರ್ಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ಕಲೆ ಹಾಕಿದ್ದಾರೆ. ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಐಸಿಸ್ ಶಂಕಿತ ಉಗ್ರ ಜೈಲಿನಿಂದಲೇ ಸ್ಯಾಟಲೈಟ್ ೇನ್ ಬಳಕೆ ಮಾಡಿದ್ದು ಭಾರೀ ವಿವಾದ ಸೃಷ್ಟಿಸಿತ್ತು.
ಕರ್ನಾಟಕದಲ್ಲಿ ಕೆಲವು ಮುಸ್ಲಿಂ ಯುವಕರನ್ನು ಐಸಿಸಿ ಭಯೋತ್ಪಾದನಾ ಸಂಘಟನೆಗೆ ಮನ ಪರಿವರ್ತನೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಶಂಕಿತ ಉಗ್ರ ಜುಹಾಬ್ ಮುನ್ನಾ ಅಲಿಯಾಸ್ ಜುಹಾದ್ ಹಮೀದ್ ಶಕೀಲ್ ಮುನ್ನಾನನ್ನು ಬಂಧಿಸಿದ್ದರು.
ಭಾರತದ ಪ್ರಮುಖ ಉಗ್ರರ ಪಟ್ಟಿಯಲ್ಲಿದ್ದ ಜುಹಾಬ್ ಮುನ್ನಾನನ್ನು 2020ರಲ್ಲಿ ದುಬೈನಲ್ಲಿ ಬಂಧಿಸಲಾಗಿತ್ತು. ನಂತರ ಕೇಂದ್ರ ಸರ್ಕಾರ ರಪೋಲ್ಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 2023 ರಲ್ಲಿ ಈತನನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು.
ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ಯಾಟಲೈಟ್ ೇನ್ ಬಳಕೆ ಮಾಡಿದ್ದ ಈತ, ವಿಡಿಯೋ ಒಂದರಲ್ಲಿ ಕೆಲವು ಸಂಶಯಾಸ್ಪದ ವ್ಯಕ್ತಿಗಳ ಜೊತೆ ಮಾತನಾಡುತ್ತಿರುವುದು ಬೆಳಕಿಗೆ ಬಂದಿತ್ತು.
ತನ್ನ ವಿಡಿಯೋದಲ್ಲಿ ಪಾಸ್ವರ್ಡ್ ಲಭ್ಯವಿದ್ದರೆ ನಾವು ಸಿಕ್ಕಿಬೀಳುತ್ತೇವೆ. ಹೀಗಾಗಿ ನಾನು ಯಾರಿಗೂ ಪಾಸ್ವರ್ಡ್ ಕೊಟ್ಟಿಲ್ಲ .ನಮಗೆ ಇಲ್ಲಿ ಎಲ್ಲವೂ ಸುಲಭವಾಗಿ ದಕ್ಕುತ್ತವೆ ಎಂದು ಹೇಳಿದ್ದ. ಸಾಮಾನ್ಯವಾಗಿ ಜೈಲಲ್ಲಿರುವ ಆರೋಪಿಗಳು ಮೊಬೈಲ್ ಬಳಕೆ ಮಾಡುವಂತಿಲ್ಲ. ಬಳಸಿದರೆ ಮೇಲಾಧಿಕಾರಿಗಳ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಆದರೆ ಜುಹಾಬ್ ಸ್ಯಾಟ್ಲೈಟ್ ೇನ್ ಬಳಕೆ ಮಾಡಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಇದು ಎಲ್ಲಿಂದ ಬಂತು? ಕೊಟ್ಟವರು ಯಾರು? ಆತ ಕರೆ ಮಾಡಿದ್ದು ಎಲ್ಲಿಗೆ ? ಎಂಬುದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಇದರ ಬೆನ್ನಲ್ಲೇ ಎನ್ಐಎ ತಂಡ ಈಗಾಗಲೇ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್ ಮುನ್ನಾನನ್ನು ವಿಚಾರಣೆ ನಡೆಸಿ, ಹಲವು ಮಾಹಿತಿಗಳನ್ನು ಹಾಗೂ ದಾಖಲೆಗಳನ್ನು ಪಡೆದುಕೊಂಡಿದೆ. ಈ ಉಗ್ರ ಜೈಲಿನಲ್ಲಿದ್ದುಕೊಂಡು ಯಾರನ್ನೆಲ್ಲ ಸಂಪರ್ಕಿಸಿದ್ದಾನೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡಿರುವುದರ ಜತೆಗೆ ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟದ ಬಗ್ಗೆಯೂ ಈತನನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆೆ.
