ಕಾರವಾರ,ಡಿ.10-ಇಲ್ಲಿನ ಕಾರಾಗೃಹದಲ್ಲಿ ಕೆಲ ಖೈದಿಗಳು ಮತ್ತೆ ದಾಂಧಲೆ ಸೃಷ್ಟಿಸಿ ಟಿ.ವಿ ಹಾಗೂ ಇನ್ನಿತರ ವಸ್ತುಗಳನ್ನು ಒಡೆದು ಹಾನಿ ಮಾಡಿದ್ದಾರೆ.ಈ ಕಾರಾಗೃಹದಲ್ಲಿರುವ ಮಂಗಳೂರಿನ 6 ಮಂದಿ ಖೈದಿಗಳು ಏಕಾಏಕಿ ಜೈಲಿನೊಳಗೆ ಗಲಾಟೆ ಮಾಡಿದ್ದು, ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದ್ದಾರೆ.
ಸುದ್ದಿ ತಿಳಿದು ನಗರ ಠಾಣೆ ಪೊಲೀಸರ ತಂಡ ಕಾರಾಗೃಹಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದೆ.ಈ ಕಾರಾಗೃಹದೊಳಗೆ ಮಾದಕ ವಸ್ತು ಸೇರಿದಂತೆ ನಿಷೇದಿತ ವಸ್ತುಗಳ ಬಳಕೆಗೆ ಬ್ರೇಕ್ ಹಾಕಲು ಬಿಗಿ ಬಂದೋಬಸ್ತ್ ಮಾಡಿದ್ದರಿಂದ ಕುಪಿತಗೊಂಡ ರೌಡಿಗಳಾದ ಮಂಗಳೂರು ಮೂಲದ ಮೊಹಮದ್ ಅಬ್ದುಲ್ ಫಯಾನ್ ಹಾಗೂ ಕೌಶಿಕ್ ನಿಹಾಲ್ ಮೊನ್ನೆಯಷ್ಟೆ ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು.
ಈ ಇಬ್ಬರು ರೌಡಿಗಳ ವಿರುದ್ಧ ಡಕಾಯಿತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಿವೆೆ. ಇದೀಗ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೆ ಕಾರಾಗೃಹದೊಳಗೆ ಇಂದು ಮತ್ತೆ ಕೆಲವು ಖೈದಿಗಳು ದಾಂದಲೆ ನಡೆಸಿರುವುದು ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಗಿರೀಶ್ ಅವರು ಜೈಲಿನೊಳಗೆ ಮೊಕ್ಕಾಂ ಹೂಡಿದ್ದಾರೆ.
