ಶಿಡ್ಲಘಟ್ಟ,ಡಿ.11- ಕಾರ್ಮಿಕರಿಗೆ ಚಾಕು ತೋರಿಸಿ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ದರೋಡೆಕೋರರ ಕಾರು ಪಲ್ಟಿಯಾಗಿ ಒಬ್ಬ ಸಾವನ್ನಪ್ಪಿ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೋದಗೂರು ಮಳಮಾಚನಹಳ್ಳಿ ಮದ್ಯೆ ನಡೆದಿದೆ. ಆಂಧ್ರದ ಚಿತ್ತೂರಿನ ನಿವಾಸಿ ಸಿದ್ದೇಶ್ (25) ಮೃತಪಟ್ಟ ದರೋಡೆಕೋರ.
ಘಟನೆ ವಿವರ :
ಶಿಡ್ಲಘಟ್ಟ ತಾಲೂಕು ಎಚ್.ಕ್ರಾಸ್ ಮಾರ್ಗದ ಹಾರಡಿ ಬಳಿ ಟೈಲ್‌್ಸ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ನಾಲ್ವರು ಕಾರ್ಮಿಕರು ಕೆಲಸ ಬಿಟ್ಟು ಸ್ವಂತ ಊರಿಗೆ ತೆರಳಲು ಬಸ್‌ಗಾಗಿ ಎಚ್.ಕ್ರಾಸ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ ನಾಲ್ವರ ಪೈಕಿ ಮೂವರ ಬಳಿ ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಅದೇ ಸಮಯಕ್ಕೆ ರಾತ್ರಿ ಗಸ್ತು ಮುಗಿಸಿ ಠಾಣೆಗೆ ವಾಪಸ್ ಆಗುತ್ತಿದ್ದ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಎಸ್‌ಐ ಅವರ ಜೀಪ್ ಅನ್ನು ನಿಲ್ಲಿಸಿದ ಕೂಲಿ ಕಾರ್ಮಿಕರು ನಡೆದ ಘಟನೆಯನ್ನು ವಿವರಿಸಿದ್ದಾರೆ. ಕೂಡಲೆ ಕೂಲಿ ಕಾರ್ಮಿಕರ ಮೊಬೈಲ್‌ಗಳು ದರೋಡೆಕೋರರ ಬಳಿ ಇದ್ದ ಕಾರಣ ಮೊಬೈಲ್ ಟವರ್ ಲೊಕೇಷನ್ ಅನ್ನು ತಿಳಿದುಕೊಂಡು ಪೊಲೀಸರು ದರೋಡೆಕೋರರ ಕಾರನ್ನು ಹಿಂಬಾಲಿಸಿದ್ದಾರೆ.
ಆದರೆ ಅಷ್ಟರಲ್ಲಿ ದರೋಡೆ ಕೋರರ ಕಾರಿನಲ್ಲಿದ್ದ 25 ವರ್ಷದ ಸಿದ್ದು ಅಲಿಯಾಸ್ ಸಿದ್ದೇಶ್ ಮೃತಪಟ್ಟಿದ್ದಾನೆ. ಸಿದ್ದೇಶ್ ಮೂಲತಃ ಆಂಧ್ರದ ಚಿತ್ತೂರಿನವನಾಗಿದ್ದು ಲಾರಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡು ಕಳೆದ ಮೂರು ವರ್ಷಗಳಿಂದಲೂ ಹೆಂಡತಿ ಜತೆ ಕೈವಾರದಲ್ಲಿ ನೆಲೆಸಿದ್ದ ಎನ್ನಲಾಗಿದೆ.
ಇನೊಬ್ಬ ಕನ್ನಮಂಗಲ ವಾಸಿ ವೈಶಾಖ್ ಕೂಡ ಲಾರಿ ಡ್ರೈವರ್ ಕೆಲಸ ಮಾಡಿಕೊಂಡು ಕೈವಾರದಲ್ಲಿ ನೆಲೆಸಿದ್ದು ಸಿದ್ದೇಶ್ ಮತ್ತು ವೈಶಾಖ್ ಇಬ್ಬರು ಪರಿಚಿತರಾಗಿದ್ದು ಲಾರಿ ಡ್ರೈವರ್ ಕೆಲಸದ ಜತೆಗೆ ದರೋಡೆ ಕೃತ್ಯಗಳಲ್ಲಿ ಭಾಗಿ ಆಗಿದ್ದಾರೆ, ಇಬ್ಬರೂ ಕುಡಿತದ ದಾಸರಾಗಿದ್ದು ಮೊಬೈಲ್ ದರೋಡೆ ಸಮಯದಲ್ಲೂ ವಿಪರೀತ ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದರು.
ಪ್ರಕರಣ ದಾಖಲಿಸಿಕೊಂಡ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಎಸ್ಪಿ ಕುಶಲ್ ಚೌಕ್ಸೆಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲು ಸೂಚಿಸಿದ್ದಾರೆ.
