ಪುದುಚೇರಿ,ನ.27- ಸುಮಾರು 90 ಕೋಟಿ ರೂ. ಸೈಬರ್ ವಂಚನೆ ಜಾಲ ಭೇದಿಸಿರುವ ಇಲ್ಲಿನ ಪೊಲೀಸರು ನಾಲ್ವರು ಎಂಜಿನಿಯರಿಂಗ್ ಪದವೀಧರರು ಸೇರಿ 7 ಜನರನ್ನು ಬಂಧಿಸಲಾಗಿದೆ.
ಥಾಮಸ್, ಹಯಗ್ರೀವ, ಹರೀಶ್, ಗಣೇಶನ್, ಗೋವಿಂದರಾಜ್, ಯಶ್ವಿನ್, ರಾಹುಲ್ ಮತ್ತು ಅಯ್ಯಪ್ಪನ್ ಬಂಧಿತ ಆರೋಪಿಗಳಾಗಿದ್ದರೆ.
ಬಂಧಿತರಿಂದ 5 ಲಕ್ಷ ರೂ. ನಗದು, 171 ಚೆಕ್ ಬುಕ್, 75 ಎಟಿಎಂ ಕಾರ್ಡ್, 20 ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಹಲವಾರು ಬ್ಯಾಂಕ್ ಪಾಸ್‌ಬುಕ್‌ಗಳು, ಕ್ರೆಡಿಟ್ ಕಾರ್ಡ್ ಮತ್ತು ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಗಳು ಎಂಜಿನಿಯ ರಿಂಗ್ ಕಾಲೇಜಿನ ಒಳಗಿನಿಂದ ಸೈಬರ್ ವಂಚನೆ ನಡೆಸುತ್ತಿದ್ದರು. ಇದೊಂದು ಸೈಬರ್ ವಂಚನೆಯ ಹಾಟ್‌ಸ್ಪಾಟ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ತಮ ಸ್ನೇಹಿತರು ಹಾಗೂ ಕ್ಲಾಸ್‌ಮೇಟ್‌ಗಳ ಬ್ಯಾಂಕ್ ಖಾತೆ ವಿವರ ಪಡೆದು ಅವುಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಿದ್ದರು. ಬಳಿಕ ಭಾರತದ ಮೂಲಕ ಹಣವನ್ನು ಅಕ್ರಮವಾಗಿ ವರ್ಗಾಯಿಸಿ, ನಂತರ ಅವುಗಳನ್ನು ದುಬೈ ಹಾಗೂ ಚೀನಾ ನೆಟ್‌ವರ್ಕ್ ಬಳಸಿ ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸುತ್ತಿದ್ದರು ಎಂದು ತಿಳಿದುಬಂದಿದೆ.
ದಿನೇಶ್ ಮತ್ತು ಜಯಪ್ರತಾಪ್ ಇಬ್ಬರು ತಮ ಬ್ಯಾಂಕ್ ಖಾತೆಯ ವಿವರಗಳನ್ನು ಆರೋಪಿ ಹರೀಶ್‌ಗೆ ನೀಡಿದ್ದರು. ಇದಲ್ಲದೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ 20ಕ್ಕೂ ಅಧಿಕ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿದ್ದರು ಮತ್ತು ಅಕ್ರಮ ಹಣದ ಮೂಲ ತಿಳಿಯದಿರಲು ಅವುಗಳನ್ನು ಮ್ಯೂಲ್ ಖಾತೆಗಳನ್ನಾಗಿ ಬಳಸುತ್ತಿದ್ದರು.
ಈಗಾಗಲೇ ಈ ಖಾತೆಗಳಿಂದ 7 ಕೋಟಿ ರೂ.ಯನ್ನು ಡ್ರಾ ಮಾಡಲಾಗಿದೆ ಎಂದು ತನಿಖಾಧಿಗಳು ತಿಳಿಸಿದ್ದಾರೆ.ಇನ್ನೂ ಪ್ರಕರಣದ ಪ್ರಮುಖ ಆರೋಪಿ ಗಣೇಶನ್ ಹಣವನ್ನು ಕ್ರಿಪ್ಟೋಕರೆನ್ಸಿಗೆ ಪರಿವರ್ತಿಸಲು ಚೀನಾದಲ್ಲಿ ಸೈಬರ್ ವಂಚಕರೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
