ಬೆಂಗಳೂರು,ಜ.9- ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟೀಸ್ ನೀಡಿದೆ.
ಕಳೆದ ಜ.1 ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಾಗೇಂದ್ರ ಅವರ ಆಪ್ತ ವಿಶ್ವನಾಥ ಅವರ ಬಳ್ಳಾರಿಯಲ್ಲಿರುವ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ಇದರ ಬೆನ್ನಲ್ಲೇ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿ.ನಾಗೇಂದ್ರ ಅವರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸಿಬಿಐ ನೋಟೀಸ್ ಕೊಟ್ಟಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಈ ಹಿಂದೆ ಜಾರಿ ನಿರ್ದೇಶನಾಲಯ(ಇ ಡಿ)ದಿಂದ ಬಂಧನಕ್ಕೊಳಪಟ್ಟಿದ್ದ ನಾಗೇಂದ್ರ ಕೊನೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಪ್ರಕರಣವನ್ನು ಈ ಹಿಂದೆ ಎಸ್‌ಐಟಿ ತನಿಖೆ ನಡೆಸಿತ್ತು. ಆದರೆ ಬಿಜೆಪಿಯ ಶಾಸಕರಾಗಿದ್ದ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್‌ಬಂಗಾರಪ್ಪ ಹಾಗೂ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ ಸಿಬಿಐ ತನಿಖೆ ನಡೆಸಬೇಕೆಂದು ಕೋರಿದ್ದರು.
ಅಂತಿಮವಾಗಿ ಎರಡೂ ಕಡೆ ವಾದ ಮತ್ತು ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎನ್.ನಾಗಪ್ರಸನ್ನ ಅವರು ಸಿಬಿಐ ತನಿಖೆಗೆ ಆದೇಶ ನೀಡಿದ್ದರು. ಜೊತೆಗೆ ಪ್ರಕರಣ ತನಿಖೆ ನಡೆಸಿದ್ದ ಎಸ್‌ಐಟಿ ಸಂಗ್ರಹಿಸಿದ್ದ ಎಲ್ಲಾ ದಾಖಲೆಗಳನ್ನೂ ಸಿಬಿಐಗೆ ವಹಿಸಬೇಕೆಂದು ಸೂಚಿಸಿತ್ತು.
ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದವರು ಸಲ್ಲಿಸಿದ ಅರ್ಜಿಯನ್ನು ಸಿಬಿಐ ತಿರಸ್ಕರಿಸಿತ್ತು.
