ಬೆಂಗಳೂರು, ನ.28- ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಕುರ್ಚಿ ಕದನದ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡಿದ್ದರಿಂದಾಗಿ, ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿದ್ದು ಸಮುದಾಯವಾರು ಶಾಸಕರ ರಾಜೀನಾಮೆಯ ಬೆದರಿಕೆಗಳು ಕೇಳಿ ಬಂದಿವೆ.
ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದೇ ಇದ್ದರೆ, ಒಕ್ಕಲಿಗ ಸಮುದಾಯದ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಮುದಾಯದಿಂದ ಒಂದು ವೋಟು ಕೂಡ ಕಾಂಗ್ರೆಸ್ಗೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಇತ್ತ ಹಿಂದುಳಿದ ಹಾಗೂ ಶೋಷಿತ ಸಮುದಾಯಗಳ ಸಂಘಟನೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದು, ನಾಯಕತ್ವ ಬದಲಾವಣೆ ಮಾಡಿದರೆ, ಅಹಿಂದ ವರ್ಗದ 80ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಪರಿಸ್ಥಿತಿ ದಿನದಿಂದ ಗಂಭೀರ ಸ್ವರೂಪಕ್ಕೆ ತಿರುಗುತ್ತಿದೆ. ಕಳೆದ ನಾಲ್ಕೈದು ತಿಂಗಳಿನಿಂದ ನಾಯಕತ್ವ ಬದಲಾವಣೆ ವಿಚಾರವಾಗಿ ಮುಸುಕಿನ ಗುದ್ದಾಟ ನಡೆದೇ ಇದೆ. ಆದರೆ ಹೈಕಮಾಂಡ್ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದೆ. ಯಾರು ಏನೂ ಮಾಡಿಕೊಳ್ಳಲಾಗುವುದಿಲ್ಲ ಎಂಬ ಉಡಾಫೆಯಲ್ಲಿ ಭಿನ್ನ ರಾಗಗಳನ್ನು ಕಡೆಗಣಿಸಿತು ಎಂದು ಹೇಳಲಾಗಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ದೆಹಲಿಗೆ ಭೇಟಿ ನೀಡಿ ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಹೈಕಮಾಂಡ್ನಿಂದ ಸ್ಪಷ್ಟ ನಿರ್ದೇಶನ ಪಡೆಯುವ ಪ್ರಯತ್ನ ಮಾಡಿದರು. ಆದರೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಮಾತ್ರ ಅವಕಾಶ ನೀಡಿ, ಡಿ.ಕೆ.ಶಿವಕುಮಾರ್ ಭೇಟಿಗೆ ಸಮಯ ನೀಡಲಿಲ್ಲ. ಇದು ಡಿ.ಕೆ.ಶಿವಕುಮಾರ್ ಅವರನ್ನು ಕೆರಳಿಸಿದೆ ಎಂದು ಹೇಳಲಾಗಿದೆ.
ಆ ಬಳಿಕ ಶಾಸಕರ ದೆಹಲಿಯಾತ್ರೆಗಳು, ಡಿ.ಕೆ.ಶಿವಕುಮಾರ್ ಅವರ ತೆರೆಮರೆ ರಹಸ್ಯ ಕಾರ್ಯಕ್ರಮಗಳು ಚುರುಕು ಪಡೆದುಕೊಂಡಿವೆ. ಈವರೆಗೂ ಕಾಂಗ್ರೆಸ್ನ ಆಂತರಿಕ ವಿಚಾರವಾಗಿದ್ದ ಅಧಿಕಾರ ಹಂಚಿಕೆ ಈಗ ಸಮುದಾಯಗಳ ನಡುವಿನ ವಾದ-ಪ್ರತಿವಾದಕ್ಕೆ ಕಾರಣವಾಗಿವೆ.
ಸಿದ್ದರಾಮಯ್ಯ ಅವರ ಬಣದಲ್ಲಿರುವ ಕೆಲವು ಸಚಿವರು ಹಿಂದುಳಿದ ವರ್ಗ ಮತ್ತು ಶೋಷಿತ ಸಮುದಾಯಗಳ ಪ್ರಮುಖರೆಂಬಂತೆ ಬಿಂಬಿಸಿಕೊಂಡಿದ್ದಾರೆ. ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಸಚಿವರು ಮತ್ತು ಪ್ರಮುಖ ನಾಯಕರು, ಶೋಷಿತ ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳನ್ನು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲುವಂತೆ ಪ್ರೇರೇಪಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ತಾವು ಬಹಿರಂಗವಾಗಿ ಏನೂ ಹೇಳದೇ ಇದ್ದರೂ, ಆಂತರಿಕವಾಗಿ ತಮದೇ ಆದ ಕಾರ್ಯಚರಣೆಗಳನ್ನು ಅನುಸರಿಸುತ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಬಣದ ಹಲವು ಸಚಿವರು ಹಾಗೂ ಪ್ರಬಲ ನಾಯಕರನ್ನು ಭೇಟಿ ಮಾಡಿ ಬೆಂಬಲಯಾಚಿಸಿದ್ದಾರೆ. ಡಿ.ಕೆ. ಬಣದ ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ. ಅಷ್ಟಕ್ಕೆ ಸುಮನಾಗದ ಡಿ.ಕೆ.ಶಿವಕುಮಾರ್ ಮಹಾರಾಷ್ಟ್ರಕ್ಕೆ ತೆರಳಿ, ಅಲ್ಲಿ ರಾಹುಲ್ಗಾಂಧಿ ಅವರ ಆಪ್ತರೂ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ತಮ ಪರವಾದ ಲಾಬಿ ಆರಂಭಿಸುವುದಾಗಿ ತಿಳಿದು ಬಂದಿದೆ.
ದೆಹಲಿಯಲ್ಲಿ ಈಗಾಗಲೇ ಸರಣಿ ಸಭೆಗಳು ಆರಂಭಗೊಂಡಿವೆ. ಬಿಹಾರದ ವಿಧಾನಸಭೆ ಚುನಾವಣೆಯ ಫಲಿತಾಂಶ ವಿಶ್ಲೇಷಣೆಗೆ ನಿನ್ನೆ ನಡೆದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು. ಅಲ್ಲಿ ಬಿಹಾರದ ಚುನಾವಣೆ ಚರ್ಚೆ ಬಳಿಕ ರಾಜ್ಯದ ಬೆಳವಣಿಗೆಗಳ ಬಗ್ಗೆಯೂ ವರಿಷ್ಠರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ವಿದೇಶದಿಂದ ಇಂದು ದೆಹಲಿಗೆ ಮರಳಲಿದ್ದು, ನಂತರ ನಡೆಯುವ ಸಭೆಯಲ್ಲಿ ರಾಜ್ಯ ರಾಜಕೀಯದ ಗೊಂದಲಗಳಿಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವ ಕುರಿತಂತೆ ಚರ್ಚೆ ಯಾಗಲಿದೆ ಎಂದು ತಿಳಿದು ಬಂದಿದೆ.
