Friday, November 28, 2025
Homeರಾಜ್ಯಸಿಎಂ ಕುರ್ಚಿ ಕಿತ್ತಾಟಕ್ಕೆ ಬ್ರೇಕ್ ಹಾಕುವಂತೆ ಹೈಕಮಾಂಡ್‌ ನಾಯಕರಲ್ಲಿ ಯುವ ಸಚಿವರ ಆಗ್ರಹ

ಸಿಎಂ ಕುರ್ಚಿ ಕಿತ್ತಾಟಕ್ಕೆ ಬ್ರೇಕ್ ಹಾಕುವಂತೆ ಹೈಕಮಾಂಡ್‌ ನಾಯಕರಲ್ಲಿ ಯುವ ಸಚಿವರ ಆಗ್ರಹ

Young ministers urge high command leaders to put a stop to the CM chair tussle

ಬೆಂಗಳೂರು, ನ.27– ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಮಾತುಕತೆ ನಡೆಸುವ ಮೂಲಕ ಕುರ್ಚಿ ಕಿತ್ತಾಟವನ್ನು ಬಗೆ ಹರಿಸಿ ಸ್ಪಷ್ಟ ಸಂದೇಶ ರವಾನಿಸಬೇಕೆಂದು ಸಂಪುಟದ ಕ್ರಿಯಾಶೀಲ ಸಚಿವರ ತಂಡ ಹೈಕಮಾಂಡ್‌ ನಾಯಕರಿಗೆ ಸಂದೇಶವನ್ನು ರವಾನಿಸಿದೆ.

ಸಚಿವರಾದ ದಿನೇಶ್‌ ಗುಂಡೂರಾವ್‌, ಪ್ರಿಯಾಂಕ ಖರ್ಗೆ, ಕೃಷ್ಣ ಭೈರೇಗೌಡ ಸೇರಿದಂತೆ ಹಲವರು ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌‍ ಉಸ್ತುವಾರಿ ನಾಯಕರಾದ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಜೊತೆ ಮಾತುಕತೆ ನಡೆಸಿದ್ದು, ಅನಪೇಕ್ಷಣೀಯ ಬೆಳವಣಿಗೆಗಳಿಂದ ಕಾಂಗ್ರೆಸ್‌‍ ಪಕ್ಷಕ್ಕೆ ತೀವ್ರ ಹಾನಿಯಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು, ತಾವಾಗಿಯೇ ಕುಳಿತು ಚರ್ಚೆ ಮಾಡಿದ್ದರೆ, ಸಮಸ್ಯೆ ಬಗೆ ಹರಿಯುತಿತ್ತು. ಆದರೆ ಇಬ್ಬರ ನಡುವೆಯೂ ಪ್ರತಿಷ್ಠೆ ಹೆಚ್ಚಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಡಿ.ಕೆ.ಶಿವಕುಮಾರ್‌ ಅವರನ್ನು ಕೆರಳಿಸುತ್ತಿದ್ದಾರೆ.

ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರಾಗಿರುವ ಬಸವರಾಜರಾಯ ರೆಡ್ಡಿ ಅವರು, ಡಿ.ಕೆ.ಶಿವಕುಮಾರ್‌ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿ, ಪಕ್ಷಕ್ಕೆ ನಾನೂ ಕಷ್ಟ ಪಟ್ಟಿದ್ದೇನೆ, ಮುಖ್ಯಮಂತ್ರಿ ಹುದ್ದೆ ಬದಲಾಗುವುದಾದರೆ, ನನ್ನನ್ನು ಪರಿಗಣಿಸಬೇಕು ಎಂದಿದ್ದಾರೆ.
ಜೊತೆಗೆ ಮುಖ್ಯಮಂತ್ರಿ ಬದಲಾವಣೆಗೆ ಶಾಸಕಾಂಗ ಸಭೆಯಲ್ಲೇ ನಿರ್ಧಾರಗಳಾಗಬೇಕು ಎನ್ನುವ ಮೂಲಕ ಹೈಕಮಾಂಡ್‌ ಅವರನ್ನು ನಗಣ್ಯಮಾಡುತ್ತಿದ್ದಾರೆ.

ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರಂತೂ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ವಿಧಾನಸಭೆಯಲ್ಲೂ ಪರೋಕ್ಷ ಹೇಳಿಕೆ ನೀಡಿ, ಗಂಭೀರ ಚರ್ಚೆಗೆ ಗ್ರಾಸವಾಗಿದ್ದು, ಸಿ.ಡಿ. ಫ್ಯಾಕ್ಟರಿ ಮಾಲೀಕ ಎಂದು ಉಲ್ಲೇಖಿಸುವ ಮೂಲಕ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಕೊಟ್ಟಿದ್ದರು. ಈಗ ಮತ್ತೊಂದು ರೀತಿಯ ಮಾತುಗಳನ್ನು ಆಡುತ್ತಿದ್ದು, ವಿಧಾನಸಭೆಯನ್ನು ವಿಸರ್ಜನೆ ಮಾಡಿ, ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಚುನಾವಣೆ ನಡೆಸೋಣ, ಬಹುಮತ ಬಂದರೆ ಅವರೇ 5 ವರ್ಷ ಮುಖ್ಯಮಂತ್ರಿಯಾಗಲಿ ಎಂದು ಸವಾಲು ಹಾಕಿದ್ದಾರೆ. ಇದಕ್ಕೂ ಮೊದಲು ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ವಾಶ್‌ ಔಟ್‌ ಮಾಡುವುದಾಗಿ ರಾಜಣ್ಣ ಹೇಳಿದ್ದರು.

ಈ ರೀತಿಯ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುವವರ ಬಗ್ಗೆ ಮುಖ್ಯಮಂತ್ರಿ ಅವರು ಕಡಿವಾಣ ಹಾಕಬೇಕು. ಅದೇ ರೀತಿ ಡಿ.ಕೆ.ಶಿವಕುಮಾರ್‌ ಕೂಡ ತಮ ಬೆಂಬಲಿಗರಿಗೆ ತಿಳಿ ಹೇಳಿ ಬಹಿರಂಗವಾಗಿ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಕಡಿವಾಣ ಹಾಕಬೇಕು. ಇಲ್ಲದೇ ಹೋದರೆ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಭಾರಿ ಹಾನಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಧಿಕಾರ ಹಂಚಿಕೆಯ ಬಗ್ಗೆ ದೆಹಲಿಯಲ್ಲಿ ಯಾವ ರೀತಿಯ ಒಪ್ಪಂದಗಳಾಗಿವೆ, ಮುಂದಿನ ದಿನಗಳಲ್ಲಿ ಯಾವ ರೀತಿಯ ಆಡಳಿತ ನಡಿಯಲಿವೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟ ಪಡಿಸಬೇಕು ಎಂದು ಸಚಿವರ ನಿಯೋಗ ಆಗ್ರಹಿಸಿರುವುದಾಗಿ ಮೂಲಗಳು ತಿಳಿಸಿವೆ.

RELATED ARTICLES

Latest News