ಬೆಂಗಳೂರು, ಅ.14- ಸ್ನೇಹಿತರಿಬ್ಬರು ಬಾರ್‌ಗೆ ಹೋಗಿದ್ದಾಗ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳ ನಡೆದು ಬಾಟಲಿಯಿಂದ ಹೊಡೆದು ಬಾರ್ ಒಳಗೆ ತನ್ನ ಗೆಳೆಯನನ್ನೇ ಕೊಲೆ ಮಾಡಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.
ಕಸ್ತೂರಿ ನಗರದ ನಿವಾಸಿ ಯೋಗೇಂದ್ರ ಸಿಂಗ್(25) ಕೊಲೆಯಾದ ದುರ್ದೈವಿ. ಇವರು ಕೋಲಾರ ಜಿಲ್ಲೆಯ ನರಸಾಪುರದ ಸಾಫ್ಟ್ ವೇರ್ ಕಂಪೆನಿಯೊಂದರ ಮಿನಿ ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆರೋಪಿ ಉಮೇಶ್(28) ಸಹ ಕಸ್ತೂರಿ ನಗರದ ನಿವಾಸಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಯೋಗೇಂದ್ರ ಸಿಂಗ್ ಕಳೆದ 20 ದಿನಗಳ ಹಿಂದೆಯಷ್ಟೇ ಈ ಕೆಲಸಕ್ಕೆ ಸೇರಿಕೊಂಡಿದ್ದು, ಅಲ್ಲೇ ನೆಲೆಸಿದ್ದರು. ದಸರಾ ನಿಮಿತ್ತ ಕಂಪನಿಗೆ ರಜೆ ಇದ್ದ ಕಾರಣ ಅ. 12ರಂದು ಮಧ್ಯಾಹ್ನ ಮನೆಗೆ ಬಂದಿದ್ದಾನೆ. ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದು, ರಾತ್ರಿ 9.30ರ ಸುಮಾರಿಗೆ ಮನೆಗೆ ಹಿಂದಿರುಗಿದ್ದನು. ಆ ವೇಳೆ ತಾಯಿ ಪುಷ್ಪಾಬಾಯಿ ಅವರು ಆತನಿಗೆ ಬುದ್ಧಿವಾದ ಹೇಳಿ ನಾಳೆಯಿಂದ ನೀನು ಡ್ಯೂಟಿಗೆ ಹೋಗಬೇಕು. ತಕ್ಷಣ ನರಸಾಪುರಕ್ಕೆ ಹೊರಟು ಬಿಡು ಎಂದು ಹೇಳಿದ್ದಾರೆ.
ಟಿಂಬರ್ ಯಾರ್ಡ್ ಬಳಿ ಕಂಪನಿಯ ಬಸ್ ನಿಲ್ಲಿಸಿದ್ದೇನೆ. ಈಗ ಹೋಗಿ ಬಸ್‌ನಲ್ಲೇ ಮಲಗಿಕೊಂಡು ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗುವುದಾಗಿ ಹೇಳಿ ಯೋಗೇಂದ್ರ ಸಿಂಗ್ ಮನೆಯಿಂದ ಹೊರಟಿದ್ದಾನೆ. ಮಾರ್ಗ ಮಧ್ಯೆ ಸ್ನೇಹಿತ ಉಮೇಶ್ ಎದುರಾಗಿದ್ದು, ಇಬ್ಬರು ಮಾತನಾಡುತ್ತಾ ನಂತರ ಕಲಾವೈನ್ಸ್ ಬಾರ್‌ಗೆ ಹೋಗಿ ಮದ್ಯ ಸೇವಿಸಿದ್ದಾರೆ.
ಆ ಸಂದರ್ಭದಲ್ಲಿ ಇಬ್ಬರ ನಡುವೆ ಯಾವುದೋ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಮದ್ಯದ ಅಮಲಿನಲ್ಲಿದ್ದ ಉಮೇಶ್ ತಂಪು ಪಾನಿಯಾದ ಬಾಟಲಿಯಿಂದ ಯೋಗೇಂದ್ರ ಸಿಂಗ್ ತಲೆಗೆ ಹೊಡೆದು ಚುಚ್ಚಿದ ಪರಿಣಾಮ ರಕ್ತಸ್ರಾವವಾಗಿ ಸ್ಥಳದಲ್ಲೇ ಕುಸಿದುಬಿದಿದ್ದಾನೆ.
ರಾತ್ರಿ 10.30ರ ಸುಮಾರಿನಲ್ಲಿ ಇವರ ಮನೆಯ ಪಕ್ಕದ ನಿವಾಸಿ ಶಿವಣ್ಣ ಎಂಬುವರು, ನಿಮ್ಮ ಮಗ ಗುಡ್ಡದ ಹಳ್ಳಿಯ ಬಾರ್ ಹತ್ತಿರ ಗಲಾಟೆ ಮಾಡಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ.ತಕ್ಷಣ ತಾಯಿ ಪುಷ್ಪಾಬಾಯಿ ಅವರು ಸಂತೋಷ್ ಎಂಬುವರ ಆಟೋದಲ್ಲಿ ಮಗನನ್ನು ಹುಡುಕಿಕೊಂಡು ಮೈಸೂರು ರಸ್ತೆಯಲ್ಲಿರುವ ಕಲಾ ವೈನ್ಸ್ ಬಳಿ ಹೋಗಿ ನೋಡಿದಾಗ ಬಾರ್ ಒಳಗೆ ಮಗ ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿದೆ.ತಕ್ಷಣ ಈ ವಿಷಯವನ್ನು ಆಟೋ ಚಾಲಕ ಸಂತೋಷ್ ಅವರು ಯೋಗೇಂದ್ರ ಸಿಂಗ್ ಅವರ ತಂದೆ ವಿಶ್ವನಾಥ್ ಸಿಂಗ್ ಅವರಿಗೆ ತಿಳಿಸಿದ್ದಾರೆ.
ತಕ್ಷಣ ಅವರು ಬಾರ್ ಬಳಿ ಬಂದು ಬಾರ್‌ನ ಕ್ಯಾಷಿಯರ್ ವೆಂಕಟೇಶ್ ಹಾಗೂ ಸಪ್ಲೈಯರ್ ಯೋಗೇಶ್‌ನನ್ನು ವಿಚಾರಿಸಿದಾಗ ಉಮೇಶ್ ಎಂಬಾತ ಜಗಳವಾಡಿ ಬಾಟಲಿಯಿಂದ ಹೊಡೆದು ಚುಚ್ಚಿ ಕೊಲೆ ಮಾಡಿದ್ದಾನೆಂದು ತಿಳಿಸಿದ್ದಾರೆ. ಸುದ್ದಿ ತಿಳಿದು ಬ್ಯಾಟರಾಯನಪುರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಆರೋಪಿ ಉಮೇಶ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹಳೆಯ ದ್ವೇಷದಿಂದ ಜೊತೆಯಲ್ಲಿದ್ದುಕೊಂಡೇ ಯೋಗೇಂದ್ರ ಸಿಂಗ್‌ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.