ಬೆಂಗಳೂರು,ಅ.24- ಕಳೆದ ಎಂಟ್ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆ ಪ್ರಮಾಣ ತಗ್ಗಿದ್ದು, ಇಂದಿನಿಂದ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಕನ್ಯಾಕುಮಾರಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಆಗಾಗ್ಗೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಮುಂದುವರೆಯಲಿದೆ.
ನಿನ್ನೆ ಕೂಡ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ 6 ಸೆಂ.ಮೀ.ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಪುತ್ತೂರು ಹಾಗೂ ಉಕ್ಕೇರಿಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಹಲವೆಡೆ ಸಾಧಾರಣ ಮಳೆಯಾಗಿದೆ. ಉತ್ತರ ಒಳನಾಡಿನ ಕೆಲವೆಡೆ ಮಾತ್ರ ಮಳೆಯಾಗಿದೆ ಎಂದು ಅವರು ಹೇಳಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ತಿಳಿಸಿದ್ದಾರೆ.
ಅ.30 ರವರೆಗೂ ದಕ್ಷಿಣ ಒಳನಾಡಿನ ಹಲವೆಡೆ ಚದುರಿದಂತೆ ಅಲ್ಲಲ್ಲಿ ಮಳೆಯಾಗಲಿದೆ. ಅದೇ ರೀತಿ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲೂ ಅಲ್ಲಲ್ಲಿ ಮಳೆ ಮುಂದುವರೆಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇಂದಿನಿಂದ ಮೂರು ದಿನ ಒಣ ಹವೆ ಮುಂದುವರೆಯಲಿದ್ದು, ಮಳೆ ಕಡಿಮೆಯಾಗಲಿದೆ. ಆದರೆ ಅ.27 ರ ನಂತರ ಉತ್ತರ ಕರ್ನಾಟಕದಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಹಿಂಗಾರು ಮಳೆ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ಇದುವರೆಗೂ 171 ಮಿ.ಮೀ.ನಷ್ಟು ಮಳೆಯಾಗಿದೆ. ವಾಡಿಕೆಗಿಂತ ಶೇ.59 ಕ್ಕಿಂತ ಹೆಚ್ಚು ಮಳೆಯಾಗಿದೆ. ಈ ಅವಧಿಯ ವಾಡಿಕೆಯ ಮಳೆ ಪ್ರಮಾಣ 108 ಮಿ.ಮೀ.ನಷ್ಟಿದೆ. ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್ ತಿಂಗಳಿನಲ್ಲಿ ಮಳೆ ಹೆಚ್ಚು ಮಳೆಯಾದಂತಾಗಿದೆ.