Friday, October 3, 2025
Homeರಾಜ್ಯಸಾಹಿತ್ಯ ಭೀಷ್ಮನಿಗೆ ಕಂಬನಿ ಧಾರೆ, ನಾಳೆ ಚಾಮುಂಡಿ ತಪ್ಪಲಿನಲ್ಲಿ ಅಂತ್ಯಕ್ರಿಯೆ

ಸಾಹಿತ್ಯ ಭೀಷ್ಮನಿಗೆ ಕಂಬನಿ ಧಾರೆ, ನಾಳೆ ಚಾಮುಂಡಿ ತಪ್ಪಲಿನಲ್ಲಿ ಅಂತ್ಯಕ್ರಿಯೆ

Funeral for SL Bhyrappa tomorrow

ಬೆಂಗಳೂರು, ಸೆ.25-ಕನ್ನಡ ಸಾರಸ್ವತ ಲೋಕದ ದಿಗ್ಗಜ, ಮೇರು ಸಾಹಿತಿ, ಕಾದಂಬರಿ ಕಾರ , ಸರಸ್ವತಿ ಸಮಾನ್‌ ಪ್ರಶಸ್ತಿ ಪುರಸ್ಕೃತ, ಪದಭೂಷಣ ಡಾ. ಎಸ್‌‍.ಎಲ್‌.ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಅವರ ಅಪಾರ ಅಭಿಮಾನಿ ಬಳಗ, ಗಣ್ಯರು, ಸಾಹಿತಿಗಳು, ಕಲಾವಿದರು ಕಂಬನಿ ಮಿಡಿದರು.

ನಿನ್ನೆ ನಿಧನರಾದ ಭೈರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸಾಹಿತ್ಯಾಭಿಮಾನಿಗಳು, ಓದುಗರು, ರಾಜಕೀಯ ಗಣ್ಯರು, ಕಲಾವಿದರು, ಹಿರಿ-ಕಿರುತೆರೆಯ ನಟ-ನಟಿಯರು ಆಗಮಿಸಿ ಅಗಲಿದ ಮೇರು ಸಾಹಿತಿಗೆ ಅಶ್ರುತರ್ಪಣ ಅರ್ಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿರಿಯ ನಟಿಯರಾದ ತಾರಾ ಅನುರಾಧ, ಮಾಳವಿಕಾ ಅವಿನಾಶ್‌, ದೂರದರ್ಶನ, ಆಕಾಶವಾಣಿ ಕಲಾವಿದರು, ಹಿರಿಯ ಪತ್ರಕರ್ತರು ಸೇರಿದಂತೆ ಬೃಹತ್‌ ಅಭಿಮಾನಿ ಬಳಗವೇ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಭೈರಪ್ಪನವರ ಕಾದಂಬರಿಗಳು, ಸಾಹಿತ್ಯದ ಬಗ್ಗೆ ಗುಣಗಾನ ಮಾಡುತ್ತಾ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು. ಭೈರಪ್ಪನವರು ತಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪರಿಯನ್ನು ತಮದೇ ಆದ ರೀತಿಯಲ್ಲಿ ಓದುಗರು ಬಣ್ಣಿಸಿದರು.

ಅವರ ತವರೂರಾದ ಹಾಸನ ಜಿಲ್ಲೆಯ ಸಂತೇಶಿವರ ಗ್ರಾಮದಿಂದಲೂ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು. ಜೊತೆಗೆ ಅವರು ಕಾರ್ಯನಿರ್ವಹಿಸಿದ ಮೈಸೂರು, ದೂರದ ದೆಹಲಿ ಸೇರಿದಂತೆ ವಿವಿಧೆಡೆಯಿಂದ ಸ್ನೇಹಿತರು, ಬಂಧು-ಬಾಂಧವರು ಆಗಮಿಸಿ ಅಗಲಿದ ಚೇತನಕ್ಕೆ ಕಂಬನಿ ಮಿಡಿದರು.

ಇಂದು ಮಧ್ಯಾಹ್ನದವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಮೈಸೂರಿಗೆ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ಅಲ್ಲಿ ಸಂಜೆ ಕಲಾಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.ನಾಳೆ ರಾಜ್ಯ ಸರ್ಕಾರದ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೈರಪ್ಪನವರ ಅಂತ್ಯಕ್ರಿಯೆ ನೆರವೇರಲಿದೆ.

ಭೈರಪ್ಪ ನಿಧನಕ್ಕೆ ದೇವೇಗೌಡರ ಸಂತಾಪ
ಬೆಂಗಳೂರು, ಸೆ.25- ಖ್ಯಾತ ಕಾದಂಬರಿಕಾರ ಎಸ್‌‍.ಎಲ್‌. ಭೈರಪ್ಪನವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್‌.ಡಿ.ಕುಮಾರ
ಸ್ವಾಮಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.ಕನ್ನಡ ಸಾಹಿತ್ಯ ಲೋಕದ ಮೇರು ಲೇಖಕ, ಸರಸ್ವತಿ ಸಮಾನ್‌ ಪುರಸ್ಕೃತರಾದ, ಪದಭೂಷಣ ಡಾ.ಎಸ್‌‍.ಎಲ್‌‍.ಭೈರಪ್ಪ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು ಎಂದು ದೇವೇಗೌಡರು ತಮ ಶೋಕ ಸಂದೇಶದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಉತ್ಕೃಷ್ಟ ಕಾದಂಬರಿಗಳನ್ನು ನೀಡಿ, ಲಕ್ಷಾಂತರ ಓದುಗರ ಮನಗೆದ್ದಿದ್ದ, ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ. ಮೃತರ ಆತಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ದೇವೇಗೌಡರು ಕಂಬನಿ ಮಿಡಿದಿದ್ದಾರೆ.

ಪ್ರಖ್ಯಾತ ಕಾದಂಬರಿಕಾರ ಎಸ್‌‍.ಎಲ್‌.ಭೈರಪ್ಪ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್‌‍.ಡಿ. ಕುಮಾರಸ್ವಾಮಿ ಅವರು, ಅವರ ಅಗಲಿಕೆಯಿಂದ ಬಹುದೊಡ್ಡ ಶೂನ್ಯ ಸೃಷ್ಟಿಯಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಪರ್ವ ಮತ್ತು ಉತ್ತರಕಾಂಡ ಕಾದಂಬರಿಗಳ ಮೂಲಕ ಮಹಾಭಾರತ ಹಾಗೂ ರಾಮಾಯಣವನ್ನು ನೋಡುವ ಮತ್ತು ಓದುವ ಕ್ರಮವನ್ನೇ ಬದಲಿಸಿದ ಅಭಿಜಾತ ಕಾದಂಬರಿಕಾರ ಸರಸ್ವತಿ ಸಮಾನ ಪುರಸ್ಕೃತರು, ಪದಭೂಷಣ ಎಸ್‌‍.ಎಲ್‌‍. ಭೈರಪ್ಪನವರು ನಿಧನರಾದರೆಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು ಎಂದು ಹೆಚ್‌ಡಿಕೆ ತಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಭೈರಪ್ಪನವರ ಕಾದಂಬರಿಗಳನ್ನು ನಾನು ನಿಕಟವಾಗಿ ಓದಿದ್ದೇನೆ. ಅವರ ಕಥನ ಶೈಲಿ, ಪಾತ್ರ ಸೃಷ್ಟಿಯ ಪ್ರತಿಭೆಗೆ ಮಾರು ಹೋಗಿದ್ದೇನೆ. ಅವರು ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದಲ್ಲೇ ಬರೆದ ಅಪ್ಪಟ ಭಾರತೀಯ ಕಾದಂಬರಿಕಾರರು. ಮೇಲಾಗಿ ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದ ಅಮರ ಪ್ರತಿಭೆ ಎಂಬ ಹೆಮೆ ನನ್ನದು. ಅವರ ಅಗಲಿಕೆಯಿಂದ ಬಹುದೊಡ್ಡ ಶೂನ್ಯ ಸೃಷ್ಟಿಯಾಗಿದೆ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.

ಭೈರಪ್ಪನವರ ನಿಧನ ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಆತಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News