ಬೆಂಗಳೂರು, ಜೂ.14- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣದಲ್ಲಿ ಬಂಧನದ ವಾರೆಂಟ್ ಜಾರಿಯಾಗಿದೆ. ಆದಷ್ಟು ಬೇಗ ಬಂದು ಅವರಾಗಿಯೇ ವಿಚಾರಣೆಗೆ ಹಾಜರಾದರೆ ಒಳ್ಳೆಯದು, ಇಲ್ಲವಾದರೆ ಪೊಲೀಸರೇ ಕರೆತರುತ್ತಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೊಟ್ಟಿರುವ ನೋಟೀಸ್‌ಗೆ ಉತ್ತರ ಕೊಟ್ಟಿರುವ ಯಡಿಯೂರಪ್ಪ, ತಾವು ದೆಹಲಿಗೆ ಭೇಟಿ ನೀಡುತ್ತಿದ್ದು, 17 ರಂದು ವಾಪಸ್ ಬರುವುದಾಗಿ ತಿಳಿಸಿದ್ದಾರೆ. ಅವರನ್ನು ಕರೆತಂದು, ಕಾನೂನು ಪ್ರಕಾರ ಮಾಹಿತಿ ಪಡೆದು ಪೊಲೀಸರು ಮುಂದಿನ ಕ್ರಮಗಳನ್ನು ಜರುಗಿಸುತ್ತಾರೆ ಎಂದರು.
ಮೂರು ತಿಂಗಳ ಕಾಲ ಸುಮನಿದ್ದು ಈಗ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧಪಕ್ಷಗಳು ಅದೇ ರೀತಿಯ ಟೀಕೆ ಮಾಡಬೇಕು, ಅದನ್ನು ಬಿಟ್ಟು ಬೇರೆ ರೀತಿ ಹೇಳಲು ಸಾಧ್ಯವಿಲ್ಲ. ಯಡಿಯೂರಪ್ಪ ದೊಡ್ಡವರಿದ್ದಾರೆ.
ವಿವಿಐಪಿ ಆಗಿರುವುದರಿಂದ ಯಾವುದೇ ತಪ್ಪಾದರೂ ಪೊಲೀಸರೇ ಹೊಣೆಯಾಗಬೇಕಾಗುತ್ತದೆ. ಆ ಕಾರಣಕ್ಕಾಗಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದಾರೆ. ಸಾಕ್ಷ್ಯಾಧಾರಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ವರದಿಗಳನ್ನು ಕಾಯಲಾಗುತ್ತಿತ್ತು. ಈಗ ಆ ಪ್ರಕ್ರಿಯೆಗಳು ಮುಗಿದಿವೆ. ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ರಾಹುಲ್‌ಗಾಂಧಿಯವರು ಬೆಂಗಳೂರಿಗೆ ಬಂದಾಗ ವಿಮಾನನಿಲ್ದಾಣದಲ್ಲಿ ಸೂಚನೆ ನೀಡಿದ್ದಾರೆ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸುಮನೆ ಕಥೆ ಕಟ್ಟಿದರೆ ಪ್ರಯೋಜನವಿಲ್ಲ. ಇದು ಇಲ್ಲಿಯ ಸಮಸ್ಯೆ. ಅವರೆಲ್ಲಾ ಹಸ್ತಕ್ಷೇಪ ಮಾಡುವುದಿಲ್ಲ . ಯಾರ ಒತ್ತಡವೂ ಇದರಲ್ಲಿ ಇಲ್ಲ ಎಂದರು.
ನಟ ದರ್ಶನ್ ಅವರ ವಿಚಾರಣೆ ವಿಷಯವಾಗಿ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಹಾಕಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು.
ದರ್ಶನ್ ಪ್ರಕರಣದಲ್ಲಿ ವಿಶೇಷ ರಾಜಾತೀಥ್ಯ ನೀಡುವುದಿಲ್ಲ. ಎಲ್ಲಾ ಸಾಮಾನ್ಯ ಖೈದಿಗಳಂತೆ ಕಾನೂನು ಪ್ರಕಾರವೇ ನಡೆಸಿಕೊಳ್ಳಲಾಗುವುದು. ಬಿರಿಯಾನಿ ಕೊಟ್ಟು ಸತ್ಕರಿಸುತ್ತಿಲ್ಲ. ತಾವು ಪೊಲೀಸ್ ಆಯುಕ್ತರ ಬಳಿ ಈ ಕುರಿತು ವಿಚಾರಿಸಿದ್ದು, ರಾಜಾತೀಥ್ಯ ನೀಡುತ್ತಿಲ್ಲ, ನೀಡುವುದೂ ಇಲ್ಲ ಎಂದಿದ್ದಾರೆ. ಅದಕ್ಕೆ ಅವಕಾಶವೂ ಇಲ್ಲ. ಸದ್ಯಕ್ಕೆ ಮುಕ್ತವಾಗಿ ತನಿಖೆ ಮಾಡಲು ಪೊಲೀಸರಿಗೆ ಸಮಯಾವಕಾಶ ನೀಡಬೇಕಿದೆ ಎಂದರು.
ಠಾಣೆಗೆ ಭೇಟಿ ನೀಡುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚೆನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರಿನ ಪ್ರಕರಣದಲ್ಲಿ ಸರ್ಕಾರ ತುರ್ತು ಸ್ಪಂದನೆ ಮಾಡಿದೆ. ಇಬ್ಬರು ಮೃತಪಟ್ಟಿದ್ದಾರೆ. ಹಲವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲ ಅಧಿಕಾರಿಗಳನ್ನು ಅಮಾನತುಪಡಿಸಲಾಗಿದೆ ಎಂದರು.
ಜಾತ್ರೆ ಇದ್ದಿದ್ದರಿಂದ ಬೆಟ್ಟದ ಮೇಲಿಂದ ನೀರು ತಂದು ತಂಬಿಟ್ಟು ಮಾಡಲಾಗಿತ್ತು. ಅದನ್ನು ಸೇವಿಸಿದ ಬಳಿಕ ಅನಾರೋಗ್ಯ ಕಾಣಿಸಿಕೊಂಡಿದ್ದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ. ಅದೇನಿದ್ದರೂ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದರು.