Sunday, June 30, 2024
Homeರಾಜ್ಯರೇಣುಕಾಸ್ವಾಮಿ ಪ್ರಕರಣದ ಮೂವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್

ರೇಣುಕಾಸ್ವಾಮಿ ಪ್ರಕರಣದ ಮೂವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್

ಬೆಂಗಳೂರು, ಜೂ.25– ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳೆಲ್ಲಾ ಒಟ್ಟಿಗೇ ಇದ್ದರೆ ಸರಿ ಕಾಣಿಸುವುದಿಲ್ಲ ಎಂಬ ಕಾರಣಕ್ಕಾಗಿ ಮೂವರು ಆರೋಪಿಗಳನ್ನು ತುಮಕೂರಿಗೆ ಸ್ಥಳಾಂತರಿಸಲಾಗಿದೆ. ನಟ ದರ್ಶನ್‌ ಅವರನ್ನು ಸ್ಥಳಾಂತರಿಸಬೇಕೇ ಅಥವಾ ಪರಪ್ಪನ ಅಗ್ರಹಾರ ಜೈಲಿನಲ್ಲೇ ಮುಂದುವರೆಸಬೇಕೆ ಎಂಬ ಬಗ್ಗೆ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೂವರ ಸ್ಥಳಾಂತರಕ್ಕೆ ಬಂಧೀಖಾನೆ ಅಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ದರ್ಶನ್‌ ಅವರ ಸ್ಥಳಾಂತರಿಸುವ ಚರ್ಚೆಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.ಸಂಪುಟ ಪುನರ್‌ ರಚನೆ ಬಗ್ಗೆ ಕೆಲವು ಶಾಸಕರು ಬೇಡಿಕೆ ಇಟ್ಟಿರುವ ಬಗ್ಗೆ ತಾವು ಪ್ರತಿಕ್ರಿಯಿಸುವುದಿಲ್ಲ. ಹೈಕಮಾಂಡ್‌ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕೆ ನಡೆದ ನೀಟ್‌ ಪರೀಕ್ಷೆ ಅಕ್ರಮದಿಂದ ದೇಶದಲ್ಲಿ ಲಕ್ಷಾಂತರ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ದೆಹಲಿಯಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ. ರಾಹುಲ್‌ಗಾಂಧಿಯವರು ಕಾಂಗ್ರೆಸ್‌‍ನ ಮುಖಂಡರಿಗೆ ಈ ಬಗ್ಗೆ ವಿವರಣೆ ನೀಡಿದ್ದಾರೆ. ಕೇಂದ್ರ ಸರ್ಕಾರ ಈ ವಿಚಾರವಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮರು ಪರೀಕ್ಷೆ ನಡೆಸುವುದು ಅಥವಾ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಬೇಕಿದೆ. ಪ್ರಕರಣದ ತನಿಖೆಯಾಗಬೇಕು. ಈ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿರುವ ಪ್ರಧಾನಮಂತ್ರಿ ಹಾಗೂ ಶಿಕ್ಷಣ ಸಚಿವರಾಗಲೀ ತೀರ್ಮಾನ ಪ್ರಕಟಿಸಬೇಕಿತ್ತು ಎಂದು ಹೇಳಿದರು.
ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ನೀಟ್‌ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗಳ ಪ್ರವೇಶ ಈ ವೇಳೆಗೆ ಆರಂಭವಾಗಬೇಕಿತ್ತು. ಇಂಜಿನಿಯರಿಂಗ್‌ ಪ್ರವೇಶದಲ್ಲೂ ಗೊಂದಲಗಳಿವೆ. ಈ ಎಲ್ಲದಕ್ಕೂ ಉತ್ತರ ಕೊಟ್ಟು, ಸ್ಪಷ್ಟನೆ ನೀಡಬೇಕಿದೆ ಎಂದರು.

ವಿದ್ಯಾರ್ಥಿಗಳಿಗೆ ಸುಲಭವಾಗಿ ಸೀಟು ಸಿಕ್ಕುವಂತೆ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಬೇಕಿದೆ. ಕರ್ನಾಟಕದಲ್ಲಿ, ದೇಶದಲ್ಲೇ ಮೊದಲ ಬಾರಿಗೆ ಯಶಸ್ವಿಯಾಗಿ ಸಿಇಟಿಯನ್ನು ನಡೆಸಲಾಗಿತ್ತು. ನೀಟ್‌ ಬದಲಾಗಿ ರಾಜ್ಯಗಳಿಗೆ ಪರೀಕ್ಷೆ ನಡೆಸುವ ಅಧಿಕಾರ ನೀಡಬೇಕು. ಬೇರೆ ರಾಜ್ಯಗಳ ವಿದ್ಯಾರ್ಥಿಗಳು ತಮಗಿಷ್ಟ ಬಂದ ಕಾಲೇಜಿನಲ್ಲಿ ಓದಲು ಬಯಸಿದರೆ ಪರೀಕ್ಷೆ ಬರೆದು ಸೀಟು ಪಡೆದುಕೊಳ್ಳುತ್ತಾರೆ. ಅದಕ್ಕೆ ವ್ಯವಸ್ಥಿತವಾಗಿ ಅವಕಾಶವನ್ನು ಕಲ್ಪಿಸಬೇಕು ಎಂದು ಅಭಿಪ್ರಾಯ ಪಟ್ಟರು.

ಹೇಮಾವತಿ ನಾಲಾ ತಿರುವು ಯೋಜನೆಗೆ ಸಂಬಂಧಪಟ್ಟಂತೆ ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿನ್ನೆ ಸಭೆ ನಡೆಸಿ ಚರ್ಚಿಸಿದ್ದಾರೆ. ತುಮಕೂರು ಜಿಲ್ಲೆಯ ಜನರಿಗೆ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಅದಕ್ಕೆ ಸಭೆಯಲ್ಲಿದ್ದ ನೀರಾವರಿ ತಜ್ಞರು ಹಾಗೂ ವಿವಿಧ ಸಂಘಟನೆಗಳು ಸಹಮತ ವ್ಯಕ್ತಪಡಿಸಿದರು. ಈಗ ಪ್ರತಿಭಟನೆಯ ಮಾರ್ಗ ಹಿಡಿದಿದ್ದಾರೆ. ಮುಂದಿನ ಕ್ರಮಗಳ ಬಗ್ಗೆ ಡಿ.ಕೆ.ಶಿವಕುಮಾರ್‌ರವರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಲು ಪರಮೇಶ್ವರ್‌ ನಿರಾಕರಿಸಿದರು.ನಿಗಮ ಮಂಡಳಿಗಳ ನಿರ್ದೇಶಕರ ಆಯ್ಕೆಗೆ ತಮ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಇದಕ್ಕೂ ಮೊದಲು ನಿಗಮಮಂಡಳಿ ನೇಮಕಾತಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ತಮ ಅಭಿಪ್ರಾಯ ಕೇಳಿಲ್ಲ ಎಂದು ನಾನು ಹೇಳಿದ್ದೆ.

ಆ ಉದ್ದೇಶಕ್ಕಾಗಿ ಈಗ ಸಮಿತಿ ಮಾಡಿದ್ದಾರೆಯೇ? ಅಥವಾ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಲಿ ಎಂಬ ಕಾರಣಕ್ಕೆ ಸಮಿತಿ ಮಾಡಿದ್ದಾರೋ? ಗೊತ್ತಿಲ್ಲ. ಮುಖ್ಯಮಂತ್ರಿಯವರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಎಂಟೂವರೆ ವರ್ಷಗಳ ಕಾಲ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ ಅನುಭವ ಇದೆ. ನಿಗಮ ಮಂಡಳಿಗಳ ಅಧ್ಯಕ್ಷ ಹಾಗೂ ನಿರ್ದೇಶಕರುಗಳ ನೇಮಕಾತಿ ಮಾಡಿಯೂ ಅನುಭವ ಇದೆ. ಒಂದು ತಿಂಗಳ ಮೊದಲೇ ಪಟ್ಟಿಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಬಿಬಿಎಂ ವಿದ್ಯಾರ್ಥಿನಿ ಪ್ರಭುದ್ದ ಅವರ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ವಿದ್ಯಾರ್ಥಿನಿಯ ತಾಯಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ತಮನ್ನೂ ಸೇರಿದಂತೆ ಹಲವರ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

RELATED ARTICLES

Latest News