Sunday, September 8, 2024
Homeರಾಜ್ಯನಮ್ಮ ಗ್ಯಾರಂಟಿ ಯೋಜನೆಗಳನ್ನು ಕೇಂದ್ರ ಸರ್ಕಾರ ಹೇಗೆ ನಿಲ್ಲಿಸಲು ಸಾಧ್ಯ..? : ಪರಮೇಶ್ವರ್‌

ನಮ್ಮ ಗ್ಯಾರಂಟಿ ಯೋಜನೆಗಳನ್ನು ಕೇಂದ್ರ ಸರ್ಕಾರ ಹೇಗೆ ನಿಲ್ಲಿಸಲು ಸಾಧ್ಯ..? : ಪರಮೇಶ್ವರ್‌

ಬೆಂಗಳೂರು,ಜು.8- ಸರ್ಕಾರದ ಪಂಚಖಾತ್ರಿ ಯೋಜನೆಗಳನ್ನು ಸ್ಥಗಿಗೊಳಿಸುವಂತೆ ಕೇಂದ್ರ ಸರ್ಕಾರ ಮೊದಲು ಸೂಚನೆ ನೀಡಲಿ,ಅನಂತರ ರಾಜ್ಯಸರ್ಕಾರ ಆ ಕುರಿತು ಪರಿಶೀಲನೆ ನಡೆಸಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.
ರಾಜ್ಯದ ಆಡಳಿತ ನಡೆಸಲು ಜನ ನಮನ್ನು ಆಯ್ಕೆ ಮಾಡಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸಲು ಬಿಜೆಪಿಯವರನ್ನು ಆಯ್ಕೆ ಮಾಡಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಪಂಚಖಾತ್ರಿ ಯೋಜನೆಗಳ ವಿಚಾರದಲ್ಲಿ ಹೇಗೆ ನಿರ್ದೇಶನ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.

ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್‌ ಅವರು ಕೇಂದ್ರಸರ್ಕಾರಕ್ಕೆ ಪತ್ರ ಬರೆದು, ಪಂಚಖಾತ್ರಿ ಯೋಜನೆಗಳನ್ನು ಸ್ಥಗಿತಗೊಳಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಆರ್ಥಿಕ ಸಂಕಷ್ಟ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ನಾವು ಬಗೆಹರಿಸಿಕೊಳ್ಳುತ್ತೇವೆ. ಆಡಳಿತ ನಡೆಸುವವರು ನಾವು.

ಪಂಚಖಾತ್ರಿಗಳನ್ನು ವಿಧಿಸುತ್ತವೆ ಎಂದು ಎಂದೂ ಹೇಳಿಲ್ಲ. ಯೋಜನೆಗಾಗಿ 52 ಸಾವಿರ ಕೋಟಿ ರೂ.ಗಳನ್ನು ನಿಗದಿ ಮಾಡಿದ್ದೇವೆ. ಇದರ ಸಾಧಕ-ಬಾಧಕಗಳನ್ನು ನಾವೇ ನಿಭಾಯಿಸಿಕೊಳ್ಳುತ್ತೇವೆ. ಅದನ್ನು ಮೀರಿ ಕೇಂದ್ರ ಸರ್ಕಾರ ಯಾವ ಆಧಾರದ ಮೇಲೆ ನಿರ್ದೇಶನ ನೀಡಲು ಸಾಧ್ಯವಿದೆ. ಮೊದಲು ಆ ರೀತಿಯ ನಿರ್ದೇಶನ ಕೊಡಲಿ ಎಂದು ಸವಾಲು ಹಾಕಿದರು.

ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರಕ್ಕೆ ಕೇಳಿದೆ. ಆದರೆ ಅಕ್ಕಿ ಖರೀದಿಗೆ ರಾಜ್ಯಸರ್ಕಾರದ ಬಳಿ ಹಣವೇ ಇಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್‌ ಜೋಷಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌ ಅವರು, ಪ್ರಹ್ಲಾದ್‌ ಜೋಷಿಯವರು ಅಕ್ಕಿ ನೀಡಲು ಸಿದ್ಧ ಎಂದು ನಾಳೆಯೇ ಪತ್ರ ಬರೆಯಲಿ, ನಾವು ಹೇಗೆ ಸ್ಪಂದಿಸುತ್ತೇವೆ ಎಂದು ಗೊತ್ತಾಗುತ್ತದೆ ಎಂದರು.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಯಾವುದನ್ನೂ ಮುಚ್ಚಿ ಹಾಕಲು ರಾಜ್ಯಸರ್ಕಾರ ಯತ್ನಿಸುತ್ತಿಲ್ಲ. ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಮದು ತೆರೆದ ಪುಸ್ತಕವಾಗಿದೆ. ಈ ಬಗ್ಗೆ ಪದೇಪದೇ ಹೇಳುವ ಅಗತ್ಯವಿಲ್ಲ. ಕುಮಾರಸ್ವಾಮಿಯವರು ನೀಡುತ್ತಿರುವ ಹೇಳಿಕೆಯ ಬಗ್ಗೆಯೂ ನಮಗೆ ಮಾಹಿತಿ ಇಲ್ಲ ಎಂದು ಹೇಳಿದರು.ಯಾವುದೇ ಹಗರಣ ನಡೆಯದೇ ಇದ್ದ ಮೇಲೆ ಎಸ್‌‍ಐಟಿಯಾಗಲೀ, ಸಿಬಿಐ ತನಿಖೆಯಾಗಲೀ ಅಗತ್ಯವಿಲ್ಲ ಎಂದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಅಗತ್ಯ ರಾಜ್ಯಸರ್ಕಾರಕ್ಕಿಲ್ಲ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಮಾಧ್ಯಮದವರು ಹೇಳಿದರು ಎಂದು ಫಾಸ್ಟ್‌ ಫಾರ್ಫರ್ಡ್‌ ಮಾಡಿಕೊಂಡು ತನಿಖೆ ಮಾಡಲಾಗುವುದಿಲ್ಲ. ಅದಕ್ಕೆ ತನ್ನದೇ ಆದ ಪ್ರಕ್ರಿಯೆಗಳಿವೆ. ಅದನ್ನು ಆಧರಿಸಿ ದೋಷಾರೋಪಣ ಪಟ್ಟಿ ಸಲ್ಲಿಸುತ್ತಾರೆ. ಸಮರ್ಪಕ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಿದರು.

ನಾವು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದಾಗ ಹೈಕಮಾಂಡ್‌ನ ನಾಯಕರನ್ನು ಭೇಟಿ ಮಾಡಿದ್ದೇವೆ. ರಾಜ್ಯಸರ್ಕಾರದ ಆಡಳಿತಕ್ಕೆ ವರಿಷ್ಠರು ಶಹಬ್ಬಾಸ್‌‍ಗಿರಿ ನೀಡಿದ್ದಾರೆ. ಇದರ ಹೊರತಾಗಿ ಹುದ್ದೆಗಳ ವಿಚಾರವಾಗಿ ಚರ್ಚೆ ಮಾಡಬೇಕು ಎಂದು ಯಾವ ನಿರ್ದೇಶನಗಳನ್ನೂ ನೀಡಿಲ್ಲ. ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಕಳುಹಿಸಿದ್ದಾರೆ ಎಂದರು.

ಪಿಎಎಸ್‌‍ಐ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಹಿಂದೆ ಮೂರು ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಆ ವಿಷಯದಲ್ಲಿ ಏನೆಲ್ಲಾ ನಡೆದಿದೆ ಎಂದು ಎಲ್ಲರಿಗೂ ಗೊತ್ತು. ಮರುಪರೀಕ್ಷೆಯಾಗಿದೆ. ನ್ಯಾಯಾಲಯ ನಿರ್ದೇಶನ ನೀಡಿದೆ. ಅಂತಿಮವಾಗಿ ಪಟ್ಟಿ ತಯಾರಾಗಿದೆ. ಅಂತಿಮವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಕೆಲ ಸ್ಪಷ್ಟನೆಗಳನ್ನು ಕೇಳಿದೆ. ಅದನ್ನು ನೀಡಿದ ಮೇಲೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಹೇಳಿದರು.

RELATED ARTICLES

Latest News