Friday, September 20, 2024
Homeರಾಜ್ಯಮುಡಾ ಪ್ರಕರಣ : ರಾಜ್ಯಪಾಲರ ನಿರ್ಧಾರದ ನಿರೀಕ್ಷೆಯಲ್ಲಿದ್ದೇವೆ ಎಂದ ಪರಮೇಶ್ವರ್

ಮುಡಾ ಪ್ರಕರಣ : ರಾಜ್ಯಪಾಲರ ನಿರ್ಧಾರದ ನಿರೀಕ್ಷೆಯಲ್ಲಿದ್ದೇವೆ ಎಂದ ಪರಮೇಶ್ವರ್

ಬೆಂಗಳೂರು,ಆ.13– ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ನ್ಯಾಯಾಲಯದ ತೀರ್ಪು ಆಧರಿಸಿ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳಬಹುದು. ನಾವು ಅದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡು ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಸಚಿವ ಸಂಪುಟ ಸಭೆ ಸಲಹೆ ನೀಡುವ ನಿರ್ಧಾರ ತೆಗೆದುಕೊಂಡು ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದರು.

ಚಾಮುಂಡಿ ದೇವಸ್ಥಾನವನ್ನು ತಮಗೆ ಬಿಟ್ಟುಕೊಡಬೇಕು ಎಂದು ರಾಜಮನೆತನದ ಪ್ರಮೋದಾ ದೇವಿಯವರು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ದೃಷ್ಟಿಯಿಂದ ನನಗೆ ಯಾವುದೇ ಮಾಹಿತಿ ಇಲ್ಲ. ಅವರ ಹೇಳಿಕೆಯನ್ನು ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಸಂದರ್ಭ ಬಂದಾಗ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಚಾಮುಂಡಿ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ಮಾಡಲು ನಿರ್ಧರಿಸಿದ್ದು ಸಮಗ್ರ ವ್ಯವಸ್ಥೆಯ ಸುಧಾರಣೆಗಾಗಿ. ಸವದತ್ತಿ ಹಾಗೂ ಉಳಿದ ಬಹಳಷ್ಟು ದೇವಸ್ಥಾನಗಳಲ್ಲಿ ಸಾಕಷ್ಟು ಹಣ ಸಂಗ್ರಹವಾಗುತ್ತಿದೆ, ಹೆಚ್ಚು ಜನ ಬರುತ್ತಾರೆ, ಭಕ್ತರಿಗೆ ಸೂಕ್ತ ಸೌಲಭ್ಯ ಒದಗಿಸಲು ಪ್ರಾಧಿಕಾರಗಳನ್ನು ರಚಿಸಿ, ಸ್ಥಳೀಯ ಆಡಳಿತಕ್ಕೆ ಜವಾಬ್ದಾರಿ ನೀಡಲಾಗುತ್ತದೆ. ಅದೇ ರೀತಿ ಚಾಮುಂಡಿ ಬೆಟ್ಟಕ್ಕೂ ಕೂಡ ಪ್ರಾಧಿಕಾರ ಮಾಡಲಾಗಿತ್ತು. ಈಗ ಮೈಸೂರು ರಾಜವಂಶಸ್ಥರು ಪ್ರಾಧಿಕಾರಕ್ಕೆ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಅರಮನೆ ಮೈದಾನದ ಜಾಗವನ್ನು ಬಳಸಿಕೊಂಡು ರಸ್ತೆ ಅಗಲೀಕರಣ ಮಾಡುವ ಪ್ರಸ್ತಾವದ ಕುರಿತು ತಮಗೆ ಮಾಹಿತಿ ಇಲ್ಲ. ಈ ಹಿಂದೆ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿದ್ದಾಗ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ಪ್ರಯತ್ನಿಸಿತ್ತು. ರಸ್ತೆ ಅಗಲೀಕರಣಕ್ಕೆ ಜಾಗವನ್ನು ಗುರುತಿಸಿ ಮೈದಾನದ ತಡೆಗೋಡೆಯನ್ನು ಒಳಭಾಗಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ವಿವರಿಸಿದರು.

ಸಾರ್ವಜನಿಕರ ದೃಷ್ಟಿಯಿಂದ ರಸ್ತೆ ಅಗಲೀಕರಣ ಮಾಡುವ ಯತ್ನ ನಡೆದಿತ್ತು. ಹಾಗೆಂದು ರಾಜಮನೆತನದ ಆಸ್ತಿಯನ್ನು ವಶಪಡಿಸಿಕೊಳ್ಳುವ ಉದ್ದೇಶವಿರಲಿಲ್ಲ. ನ್ಯಾಯಾಲಯದಲ್ಲಿ ಈ ಬಗ್ಗೆ ಹಲವು ಪ್ರಕರಣಗಳು ಹಾಗೂ ನಿರ್ದೇಶನಗಳು ಇವೆ. ನ್ಯಾಯಾಲಯದಲ್ಲಿನ ತಗಾದೆ ಬಗೆಹರಿದು ಅದನ್ನು ರಾಜಮನೆತನದವರು ಒಪ್ಪಿಕೊಂಡರೆ ರಸ್ತೆ ಅಗಲೀಕರಣ ಸುಲಭವಾಗುತ್ತದೆ. ಸದ್ಯಕ್ಕೆ ಮಧ್ಯಂತರ ತೀರ್ಪು ಬಂದಿದ್ದು, ಅಂತಿಮ ತೀರ್ಪನ್ನು ಸರ್ಕಾರ ನಿರೀಕ್ಷಿಸುತ್ತಿದೆ ಎಂದು ತಿಳಿಸಿದರು.

ಎಐಸಿಸಿ ಎಲ್ಲಾ ರಾಜ್ಯಗಳ ಕೆಪಿಸಿಸಿ ಅಧ್ಯಕ್ಷರುಗಳ ಜೊತೆ ಸಮಾಲೋಚನೆಗೆ ಸಭೆ ಕರೆದಿದೆ. ಅಲ್ಲಿ ಯಾವ ರೀತಿಯ ಚರ್ಚೆಗಳಾಗುತ್ತವೆ ಎಂಬ ಮಾಹಿತಿ ಇಲ್ಲ ಎಂದರು.ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಒಳಮೀಸಲಾತಿ ವಿಚಾರವಾಗಿ ಒತ್ತಡಗಳು ಹೆಚ್ಚಿವೆ. ಆದಷ್ಟು ಬೇಗ ಇದನ್ನು ಇತ್ಯರ್ಥಪಡಿಸಬೇಕು ಎಂಬುದು ನಮ ಬೇಡಿಕೆ ಕೂಡ ಆಗಿದೆ ಎಂದು ಹೇಳಿದರು.

ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಕೆಲವು ಸೂಚನೆಗಳನ್ನು ನೀಡುತ್ತದೆ. ರಾಜ್ಯಸರ್ಕಾರವೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತದೆ. ನಿರ್ದಿಷ್ಟ ಎಚ್ಚರಿಕೆಗಳು ಬಂದರೆ ಸೂಕ್ತ ಕ್ರಮ ವಹಿಸಲಾಗುವುದು. ವಿಮಾನನಿಲ್ದಾಣದಲ್ಲಿ ರಾಷ್ಟ್ರೀಯ ಹಬ್ಬಗಳ ಮೊದಲ ಹಾಗೂ ಅನಂತರದ ಎರಡು ದಿನ ತೀವ್ರ ನಿಗಾ ವಹಿಸಲಾಗುವುದು. ಅದೇ ರೀತಿ ಗಣೇಶ ಹಬ್ಬದ ಸಂದರ್ಭದಲ್ಲೂ ಶಾಂತಿ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿ ಬಂದೋಬಸ್ತ್ ಆಯೋಜಿಸಲಾಗಿತ್ತು. ಈ ವರ್ಷ ಅದೇ ರೀತಿ ಒಂದಷ್ಟು ಸೂಚನೆಗಳನ್ನು ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರದಿಂದ ಆರ್ಎಎಫ್ ತುಕಡಿಗಳನ್ನು ಬಳಸಿಕೊಂಡು ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹೇಳಿದರು.ವಿಧಾನಪರಿಷತ್ನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರಿಗೆ ಶಿಷ್ಟಾಚಾರದ ಪ್ರಕಾರ, ಅಗತ್ಯ ಭದ್ರತೆ ಒದಗಿಸಲಾಗುವುದು. ಒಂದು ವೇಳೆ ಅದು ಜಾರಿಯಾಗದೇ ಇದ್ದರೆ ನಾನು ಕೂಡ ಸೂಚನೆ ನೀಡುತ್ತೇನೆ ಎಂದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಶೀಘ್ರವೇ ನಿರ್ಧಾರ ಮಾಡುವುದಾಗಿ ಪ್ರತಿಕ್ರಿಯಿಸಿದ ಅವರು, ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿಯಾಗಬೇಕಿದೆ. ನಾಲ್ಕು ಮಹಾನಗರ ಪಾಲಿಕೆಗಳಿಗೆ ಹಿಂದಿನ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಆಧಾರದ ಮೇಲೆ ಚುನಾವಣೆ ನಡೆಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ನಾಲ್ಕು ಪಾಲಿಕೆಗಳಿಗೂ ಅದೇ ಆಧಾರದ ಮೇಲೆ ಚುನಾವಣೆ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES

Latest News