Tuesday, September 17, 2024
Homeರಾಜ್ಯವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ತನಿಖೆ ಕುರಿತು ಗೃಹಸಚಿವ ಪರಮೇಶ್ವರ್‌ ಪ್ರತಿಕ್ರಿಯೆ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ತನಿಖೆ ಕುರಿತು ಗೃಹಸಚಿವ ಪರಮೇಶ್ವರ್‌ ಪ್ರತಿಕ್ರಿಯೆ

ಬೆಂಗಳೂರು, ಮೇ 29- ಯಾವುದೇ ಘಟನೆ ನಡೆದರೂ ಬಿಜೆಪಿಯವರು ಸಚಿವರ ರಾಜೀನಾಮೆ ಕೇಳುವುದು ಸಾಮಾನ್ಯ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಸತ್ಯಾಂಶ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೊಂದು ಘಟನೆಯಾದಾಗಲೂ ಬಿಜೆಪಿಯವರು ಆಯಾ ಸಚಿವರ ರಾಜೀನಾಮೆ ಕೇಳುತ್ತಾರೆ. ಅವರು ರಾಜೀನಾಮೆ ಕೇಳುವುದು ಸರಿ. ಆದರೆ ಸತ್ಯಾಂಶ ತಿಳಿಯಬೇಕಲ್ಲ ಎಂದರು.

ಹಣ ವರ್ಗಾವಣೆ ಮಾಡುವಂತೆ ಸಚಿವರು ಮೌಖಿಕ ಆದೇಶ ನೀಡಿದ್ದಾರೆ ಎಂದು ಮೃತಪಟ್ಟ ಅಧಿಕಾರಿ ಚಂದ್ರಶೇಖರ್‌ ಮರಣಪತ್ರದಲ್ಲಿ ಬರೆದಿದ್ದಾರೆ. ಅದು ಸತ್ಯ ಅಥವಾ ಸುಳ್ಳು ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಸಚಿವರಿಗೆ ಗೊತ್ತಿದ್ದೇ ಹಣ ಹೋಗಿದೆಯೇ? ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.

ಈ ಹಿಂದೆ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆಗಿನ ಸಚಿವ ಈಶ್ವರಪ್ಪ ಅವರ ಹೆಸರನ್ನು ನೇರವಾಗಿ ಹೇಳಿದ್ದರು. ಇಲ್ಲಿ ಆ ರೀತಿ ಹೆಸರು ಹೇಳಿಲ್ಲ. ಹಾಗಾಗಿ ತನಿಖೆ ವರದಿ ಕಾಯಬೇಕಿದೆ. ವರ್ಗಾವಣೆಯಾಗಿರುವ ಮೊತ್ತದ ಬಗ್ಗೆ ದಿನಕ್ಕೊಂದು ಮಾಹಿತಿ ಕೇಳಿಬರುತ್ತಿದೆ. ಎಂಟ್ಹೆತ್ತು ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿಯೂ ಇದೆ. ಸಿಐಡಿ ಅಧಿಕಾರಿಗಳು ಎಲ್ಲವನ್ನೂ ತನಿಖೆ ನಡೆಸುತ್ತಿದ್ದಾರೆ ಎಂದರು.

ವಿಮಾನನಿಲ್ದಾಣದಲ್ಲೇ ಪ್ರಜ್ವಲ್‌ ರೇವಣ್ಣ ಬಂಧನ :
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ವಿಮಾನನಿಲ್ದಾಣದಲ್ಲೇ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ನ್ಯಾಯಾಲಯದಿಂದ ಬಂಧನದ ವಾರೆಂಟ್‌ ಇದೆ. ಜೊತೆಗೆ ಬ್ಲೂ ಕಾರ್ನರ್‌ ನೋಟೀಸ್‌‍, ಲುಕ್‌ಔಟ್‌ ನೋಟೀಸ್‌‍ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಚಾಲ್ತಿಯಲ್ಲಿಡಲಾಗಿದೆ. ಪ್ರಜ್ವಲ್‌ ರೇವಣ್ಣ ಬರುವುದನ್ನೇ ಅಧಿಕಾರಿಗಳು ಕಾಯುತ್ತಿದ್ದಾರೆ. ಬಂದ ಬಳಿಕ ಬಂಧಿಸಿ ಹೇಳಿಕೆ ಪಡೆಯುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಪೆನ್‌ಡ್ರೈವ್‌ ಬಹಿರಂಗಗೊಂಡಿರುವುದಕ್ಕೆ ಸಂಬಂಧಪಟ್ಟಂತೆ ಯಾರೇ ಭಾಗಿಯಾಗಿದ್ದರೂ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು. ಇದರಲ್ಲಿ ಕಾಂಗ್ರೆಸ್‌‍, ಬಿಜೆಪಿ ಎಂಬ ಬೇಧಭಾವವಿಲ್ಲ ಎಂದು ಹೇಳಿದರು.

ಹೈ ಪವರ್‌ ಕಮಿಟಿ ರಚನೆ :
ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಸದಸ್ಯರ ಆಯ್ಕೆ ವಿಚಾರದಲ್ಲಿ ಹಿರಿಯರನ್ನು ಪಕ್ಷಕ್ಕಾಗಿ ಕೆಲಸ ಮಾಡಿದ ಅನುಭವಿಗಳನ್ನು ಸಂಪರ್ಕಿಸುವಂತೆ ನಾನು ನೀಡಿದ್ದ ಸಲಹೆಯನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ಪಕ್ಷದೊಂದಿಗೆ ನಿಂತ ಸಮುದಾಯ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿದವರನ್ನು ಪರಿಗಣಿಸಬೇಕು ಎಂಬ ಕಾರಣಕ್ಕೆ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಅದನ್ನು ಪಾಲಿಸಲೇಬೇಕೆಂದೇನೂ ಇಲ್ಲ ಎಂದರು.

ಇಂತಹ ಸಂದರ್ಭದಲ್ಲಿ ಹಿರಿಯರನ್ನೊಳಗೊಂಡ ಉನ್ನತಾಧಿಕಾರಿಗಳ ಸಮಿತಿ ರಚಿಸಿ ಸಲಹೆ ಪಡೆದು ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ನಿಲುವು. ಆದರೆ ವಿಧಾನಪರಿಷತ್‌ನಿಂದ ಆಯ್ಕೆ ಮಾಡಲು ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ದೆಹಲಿಗೆ ತೆರಳಿದ್ದಾರೆ, ಕಾಲ ಮಿಂಚಿ ಹೋಗಿದೆ. ಮುಂದಿನ ದಿನಗಳಲ್ಲಾದರೂ ಇದನ್ನು ಪರಿಗಣಿಸಬಹುದು ಎಂದರು.

ನಾನು ಯಾರ ಹೆಸರನ್ನೂ ಶಿಫಾರಸ್ಸು ಮಾಡಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಯಾರೂ ತಮನ್ನು ಸಲಹೆ ಕೇಳಿಲ್ಲ. ಇಲಾಖೆಯಲ್ಲಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸಬೇಕು. ಆ ಕಾರಣಕ್ಕೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೆ. ಆ ವೇಳೆ ವಿಧಾನಪರಿಷತ್‌ ಸದಸ್ಯರ ಆಯ್ಕೆ ಬಗ್ಗೆ ಚರ್ಚೆಯಾಗಿಲ್ಲ ಎಂದು ಹೇಳಿದರು.

ಏಳು ಸ್ಥಾನಗಳಿಗೆ 300 ಅರ್ಜಿ ಬಂದಿವೆ. ಅವುಗಳನ್ನು ಪರಿಶೀಲನೆ ನಡೆಸುವುದು ಕಷ್ಟದ ಕೆಲಸ. ಅದಕ್ಕಾಗಿಯೇ ಹೈ ಪವರ್‌ ಕಮಿಟಿ ರಚಿಸುವಂತೆ ಸಲಹೆ ನೀಡುತ್ತೇನೆ ಎಂದರು.

RELATED ARTICLES

Latest News