ಬೆಂಗಳೂರು,ಸೆ.19– ಗದಗ ತಾಲ್ಲೂಕಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಕಾನ್‌ಸ್ಟೇಬಲ್‌ಗಳು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.ವೈರ್ಲೆಸ್ ವಿಭಾಗದ ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಅರ್ಜುನ್(29), ಈರಣ್ಣ (31) ಹಾಗೂ ಅರ್ಜುನ್ ಅವರ ಸಂಬಂಧಿ ರವಿ ನೆಲ್ಲೂರು (43) ಮೃತಪಟ್ಟವರು.
ಕಾನ್‌ಸ್ಟೇಬಲ್ ಅರ್ಜುನ್ ಅವರು ಹಾವೇರಿ ಕಂಟ್ರೋಲ್ ರೂಂ ನಲ್ಲಿ ಹಾಗೂ ಈರಣ್ಣ ಅವರು ಕೊಪ್ಪಳ ಕಂಟ್ರೋಲ್ ರೂಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಈ ಇಬ್ಬರು ಕಾನ್‌ಸ್ಟೇಬಲ್‌ಗಳು ಏಳು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದರು.ಈ ಮೂವರು ನಿನ್ನೆ ಸಂಜೆ 6 ಗಂಟೆ ಸುಮಾರಿನಲ್ಲಿ ಕಾರಿನಲ್ಲಿ ಹೋಗುತ್ತಿದ್ದರು. ಈರಣ್ಣ ಅವರು ಕಾರು ಚಾಲನೆ ಮಾಡುತ್ತಿದ್ದರು.
ಇವರ ಕಾರು ಗದಗ ತಾಲ್ಲೂಕಿನ ಹರ್ಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಹೋಗುತ್ತಿದ್ದಾಗ ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕ ದಾಟಿ ಪಕ್ಕದ ರಸ್ತೆಗೆ ನುಗ್ಗಿ ಆ ಮಾರ್ಗದಲ್ಲಿ ಬರುತ್ತಿದ್ದ ಗೋವಾದ ಖಾಸಗಿ ಬಸ್‌ಗೆ ಅಪ್ಪಳಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರೂ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆ ಎಷ್ಟಿತೆಂದರೆ ಕಾರಿನ ಬಿಡಿ ಭಾಗಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಗೋವಾ ಬಸ್ ಚಾಲಕ ದಿಲೀಪ್ ಹಾಗೂ ನಿರ್ವಾಹಕ ಹೀರೇಶ್ ಅವರು ಬಸ್‌ನಿಂದ ಇಳಿದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟಿರುವ ಈ ಇಬ್ಬರು ಕಾನ್‌ಸ್ಟೇಬಲ್‌ಗಳಿಗೂ ಮದುವೆ ನಿಶ್ಚಯವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಹಸೆಮಣೆ ಏರಬೇಕಾಗಿದ್ದ ಇವರಿಬ್ಬರು ದುರಂತ ಅಂತ್ಯಕಂಡಿರುವುದು ದುರ್ದೈವ.