Friday, December 27, 2024
Homeರಾಜ್ಯಬೆಳಗಾವಿಯಲ್ಲಿ ಎಐಸಿಸಿ ಕಾರ್ಯಕಾರಿಣಿ ಹಾಗೂ ಮಹಾಧಿವೇಶನದ ಶತಮಾನೋತ್ಸವ ಸಂಭ್ರಮ

ಬೆಳಗಾವಿಯಲ್ಲಿ ಎಐಸಿಸಿ ಕಾರ್ಯಕಾರಿಣಿ ಹಾಗೂ ಮಹಾಧಿವೇಶನದ ಶತಮಾನೋತ್ಸವ ಸಂಭ್ರಮ

Gandhi Bharat event in Belagavi to garner national attention

ಬೆಳಗಾವಿ,ಡಿ.26- ದೇಶದ ರಾಜಕೀಯ ಹಾಗೂ ಸಾಮಾಜಿಕ ದಿಕ್ಕಿನ ಬದಲಾವಣೆಯ ನಿರೀಕ್ಷೆ ಯೊಂದಿಗೆ ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಕಾಂಗ್ರೆಸ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಾಗೂ ಮಹಾತಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ 1924ರ ಮಹಾಧಿವೇಶನದ ಶತಮಾನೋತ್ಸವ ನಡೆಯುತ್ತಿದೆ.

ಎರಡು ದಿನಗಳ ಕಾರ್ಯಕ್ರಮದ ಪೂರ್ವಭಾವಿ ಯಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಕಾರಿಣಿ ಸಭೆ ನಡೆಯುವ ಮಹಾತ ಗಾಂಧಿ ನವನಗರದಲ್ಲಿನ ವೀರಸೌಧದಲ್ಲಿ ಮಹಾತ ಗಾಂಧೀಜಿಯವರ ಪುತ್ಥಳಿಯನ್ನು ಅನಾವರಣಗೊಳಿಸಿದರು ಮತ್ತು ಇದೇ ಸ್ಥಳದ ಸಭಾಂಗಣದಲ್ಲಿ ನಿರ್ಮಿಸಲಾಗಿರುವ ಫೋಟೊ ಗ್ಯಾಲರಿಯನ್ನು ಚರಕ ನೂಲುವ ಮೂಲಕ ಉದ್ಘಾಟಿಸಿದರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಶರಣಪ್ರಕಾಶ್ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತಿತರರು ಉಪಸ್ಥಿತರಿದ್ದರು.ಮಧ್ಯಾಹ್ನ ಕಾಂಗ್ರೆಸ್ ಬಾವಿಯಲ್ಲಿ ನಡೆದ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್ನ ಅಧಿನಾಯಕಿ ಸೋನಿಯಾಗಾಂಧಿ, ಎಐಸಿಸಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಜಯರಾಂ ರಮೇಶ್, ಸಮಿತಿಯ ಸದಸ್ಯರು ಹಾಗೂ ವಿಶೇಷ ಆಹ್ವಾನಿತರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಪಕ್ಷ ಸಂಘಟನೆ, ದೇಶದ ವರ್ತಮಾನ ಸಮಸ್ಯೆಗಳು, ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆದು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ರಾಷ್ಟ್ರೀಯ ಕಾರ್ಯಕಾರಿಣಿ ಅಂಗವಾಗಿ ಪಕ್ಷದ ಸೇವಾದಳ ಘಟಕದ ಪದಾಧಿಕಾರಿಗಳು ಆಯೋಜನೆಗೊಳಿಸಿರುವ ಪಾದಯಾತ್ರೆಯಲ್ಲಿ ರಾಷ್ಟ್ರೀಯ ನಾಯಕರು ಪಾಲ್ಗೊಂಡಿದ್ದರು.

ನಾಳೆ ಬೆಳಗಾವಿಯ ಸುವರ್ಣಸೌಧದ ಎದುರು ಮಹಾತ ಗಾಂಧೀಜಿಯವರ ಪ್ರತಿಮೆ ಅನಾವರಣಗೊಳ್ಳಲಿದೆ. ರಾಜ್ಯಸರ್ಕಾರದ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕಾಂಗ ಪಕ್ಷಗಳ ನಾಯಕರು, ವಿಧಾನಸಭೆ, ವಿಧಾನಪರಿಷತ್, ಅಧ್ಯಕ್ಷರುಗಳು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ಗಾಂಧಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದ್ದು, ಅದನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಲಾಗಿದೆ. ಖಾದಿ ಉತ್ಸವ ನಡೆಯಲಿದೆ. ನಂತರ ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಶೀರ್ಷಿಕೆಯ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ.

ಇದರಲ್ಲಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿಗಳು, ಕಾಂಗ್ರೆಸ್ ಪಕ್ಷದ 120 ಸಂಸದರು, ಎಲ್ಲಾ ರಾಜ್ಯಗಳ ಶಾಸಕಾಂಗ ಪಕ್ಷಗಳ ನಾಯಕರು, ಕಾಂಗ್ರೆಸ್ ಆಡಳಿತ ಇರುವ ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ರಾಜ್ಯದ ಶಾಸಕರು, ಪಕ್ಷದ ಪದಾಧಿಕಾರಿಗಳು ಭಾಗವಹಿಸುತ್ತಿದ್ದಾರೆ.

ಕಾಂಗ್ರೆಸ್ನ ಗಾಂಧಿಭಾರತ ಮಹಾಧಿವೇಶನದ ಶತಮಾನೋತ್ಸವ ಅಂಗವಾಗಿ ಬೆಳಗಾವಿ ದೀಪಲಂಕಾರಗಳಿಂದ ಕಂಗೊಳಿಸುತ್ತಿದೆ. ಮೈಸೂರು ದಸರಾ ಸಂದರ್ಭದಲ್ಲಿ ದೀಪಲಂಕಾರಗೊಳ್ಳುವುದನ್ನು ನೋಡಲು ದೇಶದ ನಾನಾ ಭಾಗಗಳಿಂದಲೂ ಪುರವಾಸಿಗಳು ಆಗಮಿಸುತ್ತಾರೆ. ಅದೇ ಮಾದರಿಯಲ್ಲಿ ಬೆಳಗಾವಿಯಲ್ಲೂ ವೈಭವದ ದೀಪಾಲಂಕಾರ ಮಾಡಲಾಗಿದೆ.

ಈ ಹಿಂದೆ 1924 ರಲ್ಲಿ ಕಾಂಗ್ರೆಸ್ ಅಧಿವೇಶನದ ವೇಳೆ ವಿಜಯನಗರದ ವಿರೂಪಾಕ್ಷ ಗೋಪುರ ಹೋಲುವ ಪ್ರತಿಕೃತಿಯನ್ನು ನಿರ್ಮಿಸಿ ದೀಪಲಂಕಾರ ಮಾಡಲಾಗಿತ್ತು. ಈಗ ಅದನ್ನು ಮತ್ತೆ ಪುನರ್ ಸ್ಥಾಪನೆ ಮಾಡಲಾಗಿದೆ.ಗಾಂಧೀಜಿ ಆದರ್ಶಗಳನ್ನು ಯುವಸಮುದಾಯಕ್ಕೆ ಪರಿಣಾಮಕಾರಿಯಾಗಿ ತಲುಪಿಸಲು ಮತ್ತು ಕಾಂಗ್ರೆಸ್ನ ಸೈದ್ಧಾಂತಿಕ ನಿಲುವುಗಳು, ತ್ಯಾಗ ಮನೋಭಾವಗಳ ಕುರಿತು ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

RELATED ARTICLES

Latest News