ಹಾಸನ, ಸೆ.13- ಹೆದ್ದಾರಿಯಲ್ಲಿ ಎಡಭಾಗದಲ್ಲಿ ಹೋಗುತ್ತಿದ್ದ ಸರಕು ಸಾಗಣಿಕೆಯ ಲಾರಿ ಬಲಭಾಗಕ್ಕೆ ತಿರುಗಿ ರಸ್ತೆ ವಿಭಜಕವನ್ನು ದಾಟಿ ಗಣೇಶೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದವರ ಮೇಲೆ ಹರಿದಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲೆಯ ಎಸ್‌ಪಿ ಮೊಹಮದ್ ಸುಜಿತಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ 8.30ರಿಂದ 8.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಮೊಸಳೆಹೊಸಹಳ್ಳಿಯ ಹೆದ್ದಾರಿಯಲ್ಲಿ ಮೆರವಣಿಗೆ ತೆರಳುತ್ತಿದ್ದ ಕೊನೆಯ ಭಾಗದ ಜನರ ಮೇಲೆ ಲಾರಿ ಹರಿದಿದೆ ಎಂದಿದ್ದಾರೆ.
ಸರಕು ಸಾಗಾಣಿಕೆ ವಾಹನ ನೇರವಾಗಿ ಸಾಗಬೇಕಿತ್ತು. ಆದರೆ, ಬಲಭಾಗಕ್ಕೆ ತಿರುಗಿದೆ. ಇದಕ್ಕೆ ಕಾರಣವೇನು ಎಂದು ತನಿಖೆ ಮಾಡುತ್ತಿದ್ದೇವೆ. ಮೂರು ಅಡಿ ಎತ್ತರದ ಬ್ಯಾರಿಕೇಡ್ ಅನ್ನು ಹೊಡೆದು ಎದುರಿಗೆ ಬರುತ್ತಿದ್ದ ಜನರ ಮೇಲೆ ಹರಿದಿದೆ ಎಂದಿದ್ದಾರೆ.
ಕಂಟೈನರ್ ಚಾಲಕ ಭುವನೇಶ್‌ನನ್ನು ವಿಚಾರಣೆ ನಡೆಸಲಾಗಿದ್ದು, ಆತ ಹೊಳೆನರಸೀಪುರದ ಬಸವನಪುರದವನು ಎಂದು ಗೊತ್ತಾಗಿದೆ. ಕಂಟೈನರ್‌ನಲ್ಲಿ ಯಾವ ಸರಕುಗಳಿದ್ದವು ಎಂಬುನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸದರಿ ಲಾರಿ ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದೆ. ಸರಕು ಸಾಗಾಣಿಕೆ ಕೇಂದ್ರ ಕಚೇರಿ ದೊಡ್ಡಬಳ್ಳಾಪುರದಲ್ಲಿದೆ ಎಂದು ಪ್ರಾಥಮಿಕವಾಗಿ ಮಾಹಿತಿ ದೊರೆತಿದೆ ಎಂದರು.