Sunday, October 26, 2025
Homeಬೆಂಗಳೂರುಪುಷ್ಪ ಸಿನಿಮಾ ಸ್ಟೈಲಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆಂಧ್ರದ ಗ್ಯಾಂಗ್‌ ಅರೆಸ್ಟ್

ಪುಷ್ಪ ಸಿನಿಮಾ ಸ್ಟೈಲಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆಂಧ್ರದ ಗ್ಯಾಂಗ್‌ ಅರೆಸ್ಟ್

Gang from Andhra arrested for transporting sandalwood pieces in Pushpa cinema style

ಬೆಂಗಳೂರು, ಅ.26- ತೆಲುಗಿನ ಪುಷ್ಪ ಸಿನಿಮಾ ಮಾದರಿಯಲ್ಲಿ ಶ್ರೀಗಂಧದ ತುಂಡುಗಳನ್ನು ಈರುಳ್ಳಿ ಚೀಲಗಳ ಕೆಳಗಿಟ್ಟು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಆಂಧ್ರದ ನಾಲ್ವರ ಗ್ಯಾಂಗ್‌ಅನ್ನು ಬಂಧಿಸಿರುವ ಸಿದ್ದಾಪುರ ಠಾಣೆ ಪೊಲೀಸರು 750 ಕೆಜಿ ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಶೇಕ್‌ ಅಬ್ದುಲ್‌ಕಲಾಂ, ಶೇಕ್‌ ನಾಸಿರ್‌, ಪರಮೇಶ್‌, ರಾಮ್‌ ಬಹದ್ದೂರ್‌ ಬಂಧಿತ ಆರೋಪಿಗಳು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 207 ಗೂಡ್‌್ಸ ವಾಹನ ಹಾಗೂ ಮಹೀಂದ್ರ ಪಿಕಪ್‌ ವಾಹನವನ್ನು ವಶಪಡಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ನಗರದ ಸೋಮೇಶ್ವರ ಆರ್ಚ್‌ ಬಳಿ ಈ ವಾಹನಗಳು ಬರುತ್ತಿದ್ದಂತೆ ಅಡ್ಡಗಟ್ಟಿದ ಪೊಲೀಸರು ಗೂಡ್ಸ್ ವಾಹನವನ್ನು ಪರಿಶೀಲಿಸಿದಾಗ ಆರೋಪಿಗಳು 258 ಶ್ರೀಗಂಧದ ತುಂಡುಗಳನ್ನು ಚೀಲಗಳಲ್ಲಿ ತುಂಬಿ ಅವುಗಳನ್ನು ಕೆಳಗಿಟ್ಟು ಆ ಚೀಲಗಳ ಮೇಲೆ ಈರುಳ್ಳಿ ಚೀಲಗಳನ್ನು ಜೋಡಿಸಿರುವುದು ಕಂಡುಬಂದಿದೆ. ಈ ವಾಹನದ ಹಿಂದೆ ಇದ್ದ ಮಹೀಂದ್ರ ವಾಹನವನ್ನು ಸಹ ವಶಪಡಿಸಿಕೊಂಡು ಅದರಲ್ಲಿದ್ದ ಮೂವರು ಮತ್ತು ಗೂಡ್ಸ್ ವಾಹನ ಚಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ.

ಶ್ರೀಗಂಧದ ತುಂಡುಗಳನ್ನು ಆಂಧ್ರ ಪ್ರದೇಶದ ಕರ್ನೂಲ್‌ ಅರಣ್ಯ ಪ್ರದೇಶದಿಂದ ಬೆಂಗಳೂರು ನಗರಕ್ಕೆ ತರಲಾಗುತ್ತಿತ್ತು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.ಆದರೆ, ಈ ಶ್ರೀಗಂಧದ ತುಂಡುಗಳನ್ನು ಯಾರಿಗೆ ತಲುಪಿಸಲಾಗುತ್ತಿತ್ತು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಸಿದ್ದಾಪುರ ಠಾಣೆ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಪ್ರಮುಖ ಆರೋಪಿ ಸಿಕ್ಕಿದ ನಂತರವೇ ಮತ್ತಷ್ಟು ವಿಷಯಗಳು ಬೆಳಕಿಗೆ ಬರಲಿವೆ. ಪೊಲೀಸ್‌‍ ಮೂಲಗಳ ಪ್ರಕಾರ, ಈ ಶ್ರೀಗಂಧದ ತುಂಡುಗಳನ್ನು ಬೆಂಗಳೂರು ನಗರದಿಂದ ವಿದೇಶಕ್ಕೆ ಕಳುಹಿಸಲು ಸಿದ್ಧತೆ ನಡೆದಿತ್ತು ಎಂದು ತಿಳಿದುಬಂದಿದೆ.

RELATED ARTICLES

Latest News