Saturday, October 11, 2025
Homeಬೆಂಗಳೂರುಉಪನ್ಯಾಸಕರ ಮನೆಗೆ ನುಗ್ಗಿ 1.40 ಕೋಟಿ ದೋಚಿದ್ದ 7 ಮಂದಿ ಡಕಾಯಿತರ ಗ್ಯಾಂಗ್ ಅರೆಸ್ಟ್

ಉಪನ್ಯಾಸಕರ ಮನೆಗೆ ನುಗ್ಗಿ 1.40 ಕೋಟಿ ದೋಚಿದ್ದ 7 ಮಂದಿ ಡಕಾಯಿತರ ಗ್ಯಾಂಗ್ ಅರೆಸ್ಟ್

Gang of 7 dacoits arrested for robbing Rs 1.40 crore in lecturer's house

ಬೆಂಗಳೂರು, ಅ.11- ಉಪನ್ಯಾಸಕರೊಬ್ಬರ ಮನೆಗೆ ಜಾಗೃತ ದಳದ ಅಧಿಕಾರಿಗಳಂತೆ ನುಗ್ಗಿ 1.40 ಕೋಟಿ ರೂ. ದೋಚಿದ್ದ ಏಳು ಮಂದಿ ಡಕಾಯಿತರ ತಂಡವನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಉಪನ್ಯಾಸಕರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಂಕರ್‌, ಆಂಧ್ರ ಮೂಲದ ಜಗನ್‌ಮೋಹನ್‌, ಅವನ ಸಹೋದರ ಶ್ರೀನಿವಾಸ್‌‍, ಯಲಹಂಕದಲ್ಲಿ ಮಾನವ ಹಕ್ಕುಗಳ ಸಂಘಟನೆ ಕಚೇರಿ ಹೊಂದಿದ್ದ ರಾಜೇಂದ್ರ, ಹೇಮಂತ, ಶ್ರೀನಿವಾಸ ಹಾಗೂ ಕಿರಣ್‌ ಬಂಧಿತ ಆರೋಪಿಗಳು.

ಕೋಟು, ಟೈ ಹಾಕಿಕೊಂಡು ಠಾಕುಟೀಕಾಗಿ ಡ್ರೆಸ್‌‍ ಮಾಡಿಕೊಂಡು ಕಳೆದ ಸೆ.19ರಂದು ಬೆಳಗ್ಗೆ ವಿನಾಯಕ ನಗರದಲ್ಲಿ ವಾಸವಾಗಿರುವ, ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕ ಗಿರಿರಾಜ್‌ ಎಂಬುವವರ ಮನೆ ಬಳಿ ಎಂಟು ಮಂದಿ ಬಂದಿದ್ದಾರೆ. ನಾಲ್ವರು ಹೊರಗೆ ನಿಂತಿದ್ದು, ನಾಲ್ಕು ಮಂದಿ ಮನೆ ಒಳಗೆ ಹೋಗಿದ್ದರು.

ನಂತರ ಗಿರಿರಾಜ್‌ ಅವರ ತಾಯಿ ಹಾಗೂ ಪತ್ನಿಗೆ ನಾವು ಜಾಗೃತ ದಳದ ಅಧಿಕಾರಿಗಳೆಂದು ಹೇಳಿ ಬೆದರಿಸಿ ಮನೆ ಶೋಧ ನಡೆಸಬೇಕೆಂದು ಕೆಲ ದಾಖಲೆಗಳು, ಹಣವಿದ್ದ ಸೂಟ್‌ಕೇಸ್‌‍ ಹಾಗೂ ಬ್ಯಾಗ್‌ಗಳನ್ನು ದೋಚಿ ಕಾರಿನಲ್ಲಿ ಪರಾರಿಯಾಗಿದ್ದರು.

ಗಿರಿರಾಜ್‌ ಅವರು ಊಟಕ್ಕೆಂದು ಬಂದಾಗ ಮೊದಲು ಮನೆಯವರು ಏನನ್ನೂ ಹೇಳಲಿಲ್ಲ, ನಂತರ ಜಮೀನು ಮಾರಿ ಇಟ್ಟಿದ್ದ ಹಣವನ್ನು ನೋಡಿದ್ದಾರೆ. ಹಣ ಇಲ್ಲದಿದ್ದಾಗ ಮನೆಯವರನ್ನು ವಿಚಾರಿಸಿದ್ದಾರೆ. ನಂತರ ನಡೆದ ಘಟನೆಯನ್ನು ತಿಳಿದುಕೊಂಡಿದ್ದಾರೆ.ಕೂಡಲೇ ಯಲಹಂಕ ಪೊಲೀಸ್‌‍ ಠಾಣೆಗೆ ಹೋಗಿ ಡಕಾಯಿತರು ಮನೆಗೆ ನುಗ್ಗಿ ಜಮೀನು ಮಾರಿ ಬಂದಿದ್ದ ಸುಮಾರು 1.40 ಕೋಟಿ ರೂ.ಗಳನ್ನು ದೋಚಿದ್ದಾರೆ ಎಂದು ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಯಲಹಂಕ ಠಾಣೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ನಂತರ ಸಂಜಯನಗರದಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡಕಾಯಿತಿ ಘಟನೆ ಬೆಳಕಿಗೆ ಬಂದಿದೆ.

ಈತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಇನ್ನೂ ಏಳು ಮಂದಿ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ನಂತರ ಆರೋಪಿಯ ಗೋಡೌನ್‌ ಮತ್ತು ಆಫೀಸ್‌‍ ಮೇಲೆ ದಾಳಿ ನಡೆಸಿ ಅಲ್ಲಿಟ್ಟಿದ್ದ 38,80,200 ರೂ. ನಗದು, ದಾಖಲಾತಿಗಳಿದ್ದ ಮೂರು ಬ್ಯಾಗ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಯಿತು.

ಇದೇ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಆಂಧ್ರ ಪ್ರದೇಶದ ರೇಣುಕಾಮಾಪಲ್ಲಿ ಗ್ರಾಮದ ಜಗನ್‌ಮೋಹನ್‌ನನ್ನು ಬಂಧಿಸಿ ಆತನ ಮನೆಯಲ್ಲಿಟ್ಟಿದ್ದ 55 ಲಕ್ಷ ರೂ. ಮತ್ತು ಆತನ ಸಂಬಂಧಿಕರ ಮನೆಯಲ್ಲಿರಿಸಿದ್ದ 25 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು.

ನಂತರ ವಿಜಯನಗರದ ಚೋಳರಪಾಳ್ಯದ ಆರೋಪಿ ಮನೆಯಿಂದ 1.50 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಿಬ್ಬರು ಆರೋಪಿಗಳನ್ನು ಶ್ರೀನಗರ ಹಾಗೂ ರಾಮಮೂರ್ತಿ ನಗರದಲ್ಲಿ ವಶಕ್ಕೆ ಪಡೆದು ಎಲ್ಲ ಏಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ 10 ದಿನಗಳ ಕಾಲ ಅಧಿರಕ್ಷೆಗೆ ಪಡೆದುಕೊಳ್ಳಲಾಯಿತು.

ಈ ಹಿಂದೆ ಗಿರಿರಾಜ್‌ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಂಕರ್‌ ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಎಂದು ತಿಳಿದುಬಂದಿದ್ದು, ಈತ ಕಳೆದ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದು, ದೊಮಲೂರಿನಲ್ಲಿ ವಾಸವಾಗಿದ್ದ. ಗಿರಿರಾಜ್‌ ಅವರ ಮನೆಯಲ್ಲಿ ಹಣವಿರುವ ಬಗ್ಗೆ ಸುಳಿವು ಪಡೆದುಕೊಂಡು ಪೂರ್ವ ನಿಯೋಜಿತ ಚರ್ಚೆ ನಡೆಸಿ ಈ ಡಕಾಯಿತಿ ನಡೆಸಿದ್ದರು.

ಶಂಕರ್‌ ಮನೆಯಲ್ಲಿದ್ದ 4 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಈಗ ಪೊಲೀಸರು 1.27 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್‌ ಮಾರ್ಗದರ್ಶನದಲ್ಲಿ ಎಸಿಪಿ ನರಸಿಂಹಮೂರ್ತಿ ನೇತೃತ್ವದಲ್ಲಿ ಯಲಹಂಕ ಠಾಣೆ ಇನ್ಸ್ ಪೆಕ್ಟರ್‌ ಎಂ.ಎನ್‌.ಕೃಷ್ಣಮೂರ್ತಿ ಮತ್ತವರ ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News