ಬೆಂಗಳೂರು, ಅ.30- ಕಂಡ ಕಂಡಲ್ಲಿ ಕಸ ಎಸೆಯಬೇಡಿ ಎಂದು ಬೊಬ್ಬೆ ಹೊಡೆದುಕೊಂಡರೂ ಕೇಳಿಸಿಕೊಳ್ಳದ ಸಿಲಿಕಾನ್ ಸಿಟಿಯ ಜನಕ್ಕೆ ತಕ್ಕ ಪಾಠ ಕಲಿಸಲು ಜಿಬಿಎ ಮುಂದಾಗಿದೆ. ಯಾರು ರಸ್ತೆಯಲ್ಲಿ ಕಸ ಎಸೆದು ಏನು ತಿಳಿಯದವರಂತೆ ಮನೆಗಳಿಗೆ ಹೋಗಿರುತ್ತಾರೋ ಅಂತವರನ್ನು ಪತ್ತೆ ಹಚ್ಚಿ ಅವರ ಮನೆ ಬಾಗಿಲಿಗೆ ಕಸ ಸುರಿದು ಬಿಸಿ ಮುಟ್ಟಿಸುವ ಅಭಿಯಾನಕ್ಕೆ ಇಂದಿನಿಂದ ಚಾಲನೆ ನೀಡಲಾಗಿದೆ.
ಈ ಹಿಂದಿನ 198 ಬಿಬಿಎಂಪಿ ವಾರ್ಡ್‌ಗಳಲ್ಲೂ ಈ ಅಭಿಯಾನ ನಡೆಸಲಾಗುತ್ತಿದ್ದು, ರಸ್ತೆಗಳಲ್ಲಿ ಕಸ ಎಸೆದವರನ್ನು ಪತ್ತೆ ಹಚ್ಚಿ ಅವರ ಮನೆ ಬಾಗಿಲಿಗೆ ಕಸ ಸುರಿಯುವ ಕಾರ್ಯವನ್ನು ಮಾರ್ಷಲ್‌ಗಳು ಆರಂಭಿಸಿದ್ದಾರೆ.
ರಸ್ತೆ ಬದಿಯಲ್ಲಿ ಕದ್ದು ಕಸ ಎಸೆದು ಹೋಗುವವರ ವಿಡಿಯೋ ಚಿತ್ರಿಕರಿಸಿದ ಮಾರ್ಷಲ್‌ಗಳು ಇಂದು ಅದೇ ವ್ಯಕ್ತಿಗಳ ಮನೆಗಳ ಮುಂದೆ ಕಸ ಸುರಿದು ಜಾಗೃತಿ ಮೂಡಿಸುತ್ತಿದ್ದಾರೆ. ತಾವು ಮಾಡಿದ ತಪ್ಪಿಗೆ ದಂಡ ಪಾವತಿಸುವವರಿಗೆ ಇನ್ನು ಮುಂದೆ ಕಂಡ ಕಂಡಲ್ಲಿ ಕಸ ಎಸೆಯಬೇಡಿ ಎಂದು ಬುದ್ಧಿಮಾತು ಹೇಳಿ ತಾವು ಸುರಿದ ಕಸವನ್ನು ಮತ್ತೆ ವಾಪಸ್ ತೆಗೆದುಕೊಂಡು ಹೋಗಲಾಗುತ್ತಿದೆ.
ಮನೆ ಮುಂದೆ ಕಸದ ವಾಹನಗಳು ಬಂದರೂ ಕಸ ನೀಡದೆ ರಸ್ತೆ ಬದಿಯಲ್ಲಿ ಕಸ ಎಸೆದು ಪರಾರಿಯಾಗುವವರನ್ನೇ ಟಾರ್ಗೆಟ್ ಮಾಡಿಕೊಂಡು ಈ ವಿನೂತನ ಯೋಜನೆಯನ್ನು ಜಿಬಿಎ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ.
ಕಳೆದ ಒಂದು ತಿಂಗಳಿಂದ ಪ್ರತಿ ವಾರ್ಡನಲ್ಲಿ ರಸ್ತೆ ಮೂಲೆಯಲ್ಲಿ ಕಸ ಎಸೆದ ಜನರ ವಿಡಿಯೋ ಮಾಡಲಾಗಿದೆ. ಈಗಾಗಲೇ 198 ವಾರ್ಡಗಳಲ್ಲಿ 198 ಕಸ ಎಸೆಯೋ ಜನರನ್ನು ಗುರುತಿಸಿಸಲಾಗಿತ್ತು. ಹೀಗೆ ರಸ್ತೆ ಬದಿ ಹಾಗೂ ಎಲ್ಲೇಂದರಲ್ಲಿ ಕಸ ಎಸೆದ ಮನೆಗಳ ಮುಂದೆ ಕಸ ಸುರಿದು ಜಾಗೃತಿ ಮೂಡಿಸಲಾಗುತ್ತಿದೆ.
