ಹಾಸನ,ಮೇ.10 – ಅನುಮಾನಸ್ಪದವಾಗಿ ದೈತ್ಯಾಕಾರದ ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಸುಳ್ಳಕ್ಕಿ-ಶಾಂತಿಪುರ ಬಳಿ ನಡೆದಿದೆ. ರಸ್ತೆಯ ಪಕ್ಕದಲ್ಲಿ ರಕ್ತದ ಮಡುವಿನಲ್ಲಿ ಸಲಗದ ಮೃತದೇಹ ಪತ್ತೆಯಾಗಿದೆ.
ವಿದ್ಯುತ್ ಕಂಬದಿಂದ 2 ಅಡಿ ಅಂತರದಲ್ಲಿ ಸಲಗ ಸಾವನ್ನಪ್ಪಿದ್ದು, ವಿದ್ಯುತ್ ಶಾಕ್, ಗುಂಡೇಟು ಅಥವಾ ವಾಹನ ಡಿಕ್ಕಿಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಂದಾಜು 20 ರಿಂದ 25 ವರ್ಷದೊಳಗಿನ ಒಂಟಿಸಲಗ ಇದಾಗಿದ್ದು, ಅನುಮಾನಸ್ಪದವಾಗಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಸ್ತೆಬದಿಯಲ್ಲಿ ಬಿದ್ದಿದ್ದ ಆನೆಯ ಮೃತದೇಹ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಕಲೇಶಪುರ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.