ಬೆಂಗಳೂರು, ಮೇ 24- ಮನೆಯ ಬಾತ್‌ರೂಂನಲ್ಲಿ ಅನುಮಾನಸ್ಪದವಾಗಿ ಮೃತ ಪಟ್ಟಿದ್ದ ವಿದ್ಯಾರ್ಥಿನಿ ಪ್ರಭುದ್ಯಾರನ್ನು ಕೊಲೆ ಮಾಡಿರುವುದು ಪರಿಚಯಸ್ತ ಅಪ್ರಾಪ್ತ ಎಂಬುವುದು ಸುಬ್ರಹಣ್ಯಪುರ ಠಾಣೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ಈ ಪ್ರಕರಣದ ಸಂಬಂಧ ಅಪ್ರಾಪ್ತ ಹಾಗೂ ಪರಿಚಯಸ್ತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಅಪ್ರಾಪ್ತ ಆಟವಾಡುವಾಗ ಸ್ನೇಹಿತನ ಕನ್ನಡಕ ಮುರಿದಿದ್ದರಿಂದ ಆತ ಸರಿ ಮಾಡಿಸಿಕೊಡುವಂತೆ ಹೇಳಿದ್ದರಿಂದ ಹಣದ ಅವಶ್ಯಕತೆಯಿತ್ತು. ಬೃಂದಾವನ ಲೇಔಟ್‌ನಲ್ಲಿ ನೆಲೆಸಿದ್ದ ಪ್ರಭುದ್ಯಾ ಮನೆಗೆ ಈ ಪರಿಚಯಸ್ತ ಅಪ್ರಾಪ್ತ ಅಗಾಗ್ಗೆ ಬಂದು ಹೋಗುತ್ತಿದ್ದಾಗ ಹಣಕ್ಕಾಗಿ ಆಕೆಯ ಪರ್ಸ್‌ನಿಂದ ಎರಡು ಸಾವಿರ ಹಣ ತೆಗೆದುಕೊಂಡಿದ್ದನು.
ಈ ವಿಷಯ ತಿಳಿದು ಪ್ರಭುದ್ಯಾ ಹಣ ವಾಪಸ್ ಕೊಡುವಂತೆ ಪದೇ ಪದೇ ಕೇಳುತ್ತಿದ್ದಳು. ಮೇ 15 ರಂದು ಮನೆಗೆ ಬರುವಂತೆ ಕರೆಸಿಕೊಂಡು ಹಣ ಹಿಂದಿರುಗಿಸಲು ಒತ್ತಾಯಿಸಿದಾಗ ನನ್ನನ್ನು ಕ್ಷಮಿಸುವಂತೆ ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದ.
ಆ ಸಂದರ್ಭದಲ್ಲಿ ಪ್ರಭುದ್ಯಾ ಜಾರಿ ಬಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾಳೆ. ಈಕೆ ಆಗಾಗ ಆತಹತ್ಯೆಗೆ ಯತ್ನಿಸುತ್ತಾಳೆ ಎಂದು ತಿಳಿದುಕೊಂಡಿದ್ದ ಆತ ಇದನ್ನೇ ಸರಿಯಾದ ಸಮಯವೆಂದು ತಿಳಿದು ಚಾಕುವಿನಿಂದ ಕುತ್ತಿಗೆ ಹಾಗೂ ಕೈ ಕೊಯ್ದು ಪರಾರಿಯಾಗಿದ್ದನು. ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಮೊದಲಿಗೆ ಇದು ಆತಹತ್ಯೆ ಎಂಬಂತೆ ಅನುಮಾನ ವ್ಯಕ್ತವಾಗಿತ್ತು. ಆದರೆ ಪೊಲೀಸರು ಸುದೀರ್ಘವಾಗಿ ತನಿಖೆ ಕೈಗೊಂಡಾಗ ಕೊಲೆ ಎಂಬುವುದು ತಿಳಿದು ಕೊಲೆ ಪ್ರಕರಣ ದಾಖಲಿಸಿಕೊಂಡು ಅಪ್ರಾಪ್ತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತನಿಖೆ ದಿಕ್ಕು ತಪ್ಪಿಸಿದ ಅಪ್ರಾಪ್ತ: ಪ್ರಭುದ್ಯಾ ಮನೆಗೆ ಬರುವಾಗ ಆತ ಬೇರೆ ಮನೆಯ ಮಹಡಿ ಹತ್ತಿ ಬಂದಿದ್ದರಿಂದ ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿಲ್ಲ. ಮನೆಯ ಸ್ವಲ್ಪ ದೂರದ ರಸ್ತೆಯಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಅಪ್ರಾಪ್ತನ ದೃಶ್ಯ ಸೆರೆಯಾಗಿದ್ದರಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಈ ಕೃತ್ಯ ಬೆಳಕಿಗೆ ಬಂದಿದೆ.