ಬೆಂಗಳೂರು, ಫೆ.27- ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿ, ಇಲ್ಲವೆಂದಾದರೆ ಸರ್ಕಾರವನ್ನು ವಿಸರ್ಜಿಸಿ ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘದ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಪಿಎಸ್‌ಸಿಯ ಭ್ರಷ್ಟ ವ್ಯವಸ್ಥೆಯಿಂದಾಗಿ ಲಕ್ಷಾಂತರ ಪದವೀಧರರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪದೇ ಪದೇ ತಪ್ಪುಗಳನ್ನು ಮಾಡುವ ಮೂಲಕ ಕೆಪಿಎಸ್‌ಸಿ ರಾಜ್ಯದ ವಿದ್ಯಾಂವಂತ ವರ್ಗದ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಆಯೋಗ ರೋಗಗ್ರಸ್ತವಾಗಿದ್ದು, ಕ್ಯಾನ್ಸರ್ ನ ಫೈನಲ್ ಸ್ಟೇಜ್ ತಲುಪಿದೆ ಇದಕ್ಕೆ ಮೇಜರ್ ಸರ್ಜರಿ ಬೇಕಿದೆ. ತುರ್ತು ಔಷಧೋಪಚಾರವಾಗದಿದ್ದರೆ ಸರ್ಕಾರದ ಇಡೀ ದೇಹಕ್ಕೆ ಹರಡಲಿದೆ ಎಂದು ಎಚ್ಚರಿಸಿದರು.
ಕೂಡಲೆ, ಸರ್ಕಾರ ಕೆಪಿಎಸ್‌ಸಿ ನೇಮಕಾತಿ ಸಂಬಂಧ ಮರು ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು. ಡಿಸೆಂಬರ್ 29ರಂದು ನಡೆದ ಮರುಪರೀಕ್ಷೆಯಲ್ಲಿ ಎರಡನೇ ಬಾರಿಗೂ ಕನ್ನಡ ಭಾಷಾಂತರ ಲೋಪವಾಗಿದೆ. ಈ ಸಂಬಂಧ ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘ (ಅಕ್ಸರ) ಹಾಗೂ ಇತರ ವಿದ್ಯಾರ್ಥಿ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ ಎಂದರು.
ಪ್ರತಿಭಟನೆಯ ವೇಳೆಯಲ್ಲಿ ಸರ್ಕಾರ ಎರಡು ದಿನಗಳ ಕಾಲಾವಕಾಶ ಕೇಳಿತ್ತು. 9 ದಿನ ಕಳೆದರೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಜಾಣ ಮೌನವನ್ನು ಮುರಿದು ಸಮಸ್ಯೆ ಸರಿಪಡಿಸದಿದ್ದರೆ ರಾಜ್ಯದ ಜನತೆ ದಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.
ಕೆಪಿಎಸ್‌ಸಿ ಇಂದ ರಾಜ್ಯದ ಜನತೆಗೆ ತುಂಬಾ ಅನ್ಯಾಯವಾಗಿದೆ. ಸಂಸ್ಥೆಯ ಮೇಲೆ ನಂಬಿಕೆ ಬರುವಂತೆ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಬೇಕು. ಯುಪಿಎಸ್‌ಸಿ ಮಾದರಿಯನ್ನು ಕೆಪಿಎಸ್‌ಸಿ ಅನುಸರಿಸಬೇಕು, ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ಕೆಪಿಎಸ್‌ಸಿ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಬೇಕು, ವಿಶೇಷ ಭಾಷಾಂತರ ಶಾಖೆಯನ್ನು ಹೊಂದಬೇಕು, ನೇಮಕಾತಿ ಸಂಬಂಧ ವಾರ್ಷಿಕ ಕ್ಯಾಲೆಂಡರ್ ಹೊರಡಿಸಬೇಕು, ನೇಮಕಾತಿ ಪ್ರಕ್ರಿಯೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷರಾದ ಸಂತೋಷ್ ಮರೂರು, ಕಾರ್ಯಾಧ್ಯಕ್ಷರಾದ ಲೋಕೇಶ್ ರಾಮ್, ಪ್ರಧಾನ ಕಾರ್ಯದರ್ಶಿ ಪವನ್ ಮಹಾರಾಜ್, ಮಹಿಳಾ ಕಾರ್ಯದರ್ಶಿ ಪವಿತ್ರಾ ಕೋಲಾರ ಮತ್ತಿತರರು ಉಪಸ್ಥಿತರಿದ್ದರು.