ಬೆಂಗಳೂರು, ಏ.4- ಈ ಬಾರಿಯ ಲೋಕಸಭಾ ಚುನಾವಣೆ ಆರಂಭದಲ್ಲಿ, ಅಭ್ಯರ್ಥಿಗಳು ಟಿಕೆಟ್ ಪಡೆಯುವ ಸಂದರ್ಭದಲ್ಲಿ ಅತಿಹೆಚ್ಚು ಟ್ರೆಂಡ್ ಪಡೆದಿದ್ದು ಗೋ ಬ್ಯಾಕ್ ಘೋಷಣೆಗಳು, ಗೋ ಬ್ಯಾಕ್ ಪ್ರತಿಭಟನೆಗಳು. ಬೀದರ್ನಿಂದ ಕೋಲಾರದ ವರೆಗೆ, ಬಳ್ಳಾರಿಯಿಂದ ಚಾಮರಾಜನಗರದ ವರೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಗೋಬ್ಯಾಕ್… ಗೋಬ್ಯಾಕ್ ಘೋಷಣೆಗಳು ಮೊಳಗಿದ್ದು, ವಿಶೇಷವಾಗಿತ್ತು.
ಕೆಲವು ಕ್ಷೇತ್ರಗಳಲ್ಲಿ ಗೋ ಬ್ಯಾಕ್ ಘೋಷಣೆ, ಪ್ರತಿಭಟನೆಗಳು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಆತಂಕವನ್ನು ಸೃಷ್ಟಿಸಿ ಅಭ್ಯರ್ಥಿಗಳ ಬದಲಾವಣೆ, ಬೇರೆ ಕ್ಷೇತ್ರಗಳಿಗೆ ಸ್ಥಳಾಂತರ ಮಾಡಬೇಕಾದ ಇಕ್ಕಟ್ಟಿನ ಸನ್ನಿವೇಶ ಸೃಷ್ಟಿಯಾಯ್ತು. ಹಲವೆಡೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮುಜುಗರಕ್ಕೆ ಅನುಭವಿಸುವಂತಾಯ್ತು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರು, ಸಚಿವರಾಗಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಘೋಷಣೆಗಳು ಕೇಳಿ ಬಂದವು. ಆರಂಭದಲ್ಲಿ ನಿರ್ಲಕ್ಷ್ಯ ಮಾಡಲಾಯಿತು. ಆದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಾಗ ಶೋಭ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬದಲಾಯಿಸಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಬೇಕಾಯಿತು.
ಅತ್ತ ಬೀದರ್ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಾನ್ ಖೂಬಾ ವಿರುದ್ಧವೂ ಕೂಡ ಸ್ವಪಕ್ಷದವರಿಂದಲೇ ಗೋಬ್ಯಾಕ್ ಘೋಷಣೆಗಳು ಕೇಳಿಬಂದವು. ಆರಂಭದಲ್ಲಿ ಇವರ ವಿರುದ್ಧ ಪ್ರತಿಭಟನೆಗಳು, ಅಸಮಾಧಾನ, ಅತೃಪ್ತಿ, ಆಕ್ರೋಶ ಭುಗಿಲೆದ್ದಿತ್ತು. ಪಕ್ಷದ ಮುಖಂಡರು ಮಧ್ಯಪ್ರವೇಶಿಸಿ ಬಂಡಾಯವನ್ನು ಶಮನಗೊಳಿಸಿದರು.
ಕೊಪ್ಪಳದಲ್ಲಿ ಕರಡಿ ಸಂಗಣ್ಣಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಲಿ ಬಿಜೆಪಿ ಅಭ್ಯರ್ಥಿ ಬಸವರಾಜು ಕ್ಯಾವಟಗಿ ವಿರುದ್ಧ ಗೋಬ್ಯಾಕ್ ಘೋಷಣೆ ಮೊಳಗಿಸಿದ್ದರು. ಇಲ್ಲೂ ಕೂಡ ವರಿಷ್ಠರು ಮಧ್ಯ ಪ್ರವೇಶಿಸಿ ಬಂಡಾಯ ಶಮನಗೊಳಿಸಿದ್ದರು.
ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ವಿರುದ್ಧ ಬಿಜೆಪಿ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡಿದ್ದಾರೆಂದು ಅಸಮಾಧಾನಗೊಂಡ ಸ್ಥಳೀಯರು ಗೋಬ್ಯಾಕ್ ಗೋವಿಂದ ಕಾರಜೋಳ ಎಂಬ ಘೋಷಣೆ ಮೊಳಗಿಸಿದ್ದರು. ಶಾಸಕ ಚಂದ್ರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಬೇಕೆಂದು ಕೊನೆವರೆಗೂ ಪ್ರಯತ್ನ ನಡೆಸಿ ಫಲಪ್ರದವಾಗದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಂಡಾಯ ಸಾರಿದ್ದರಾದರೂ ಹೈಕಮಾಂಡ್ ನಾಯಕರು ಮಾತುಕತೆ ನಡೆಸಿ ಅಸಮಾಧಾನ ಸರಿಪಡಿಸಿದರು.
ಬಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧವೂ ಗೋ ಬ್ಯಾಕ್ ಘೋಷಣೆಗಳು ಕೇಳಿಬಂದವು. ಸುಧಾಕರ್ ಹಾಗೂ ವಿಶ್ವನಾಥ್ ಪುತ್ರನ ನಡುವೆ ಟಿಕೆಟ್ಗಾಗಿ ಪೈಪೊಟಿ ಏರ್ಪಟ್ಟಿತ್ತು. ಟಿಕೆಟ್ ಪಡೆಯುವಲ್ಲಿ ಸುಧಾಕರ್ ಯಶಸ್ವಿಯಾಗುತ್ತಿದ್ದಂತೆ ಅಸಮಾಧಾನಗೊಂಡ ವಿಶ್ವನಾಥ್ ಬೆಂಬಲಿಗರು ಗೋ ಬ್ಯಾಕ್ ಸುಧಾಕರ್ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು.
ಕೋಲಾರದಲ್ಲಿ ಕೆ.ಎಚ್. ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವೆ ಟಿಕೆಟ್ಗಾಗಿ ಜಿದ್ದಾಜಿದ್ದಿಯೇ ನಡೆದಿತ್ತು. ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಕೆ.ಎಚ್. ಮುನಿಯಪ್ಪ ಭಾರೀ ಪ್ರಯತ್ನ ನಡೆಸಿದ್ದರು. ರಮೇಶ್ ಕುಮಾರ್ ಬಣದವರು ಅವರ ಕಡೆಯವರಿಗೆ ಟಿಕೆಟ್ ಕೊಡಸಲು ಪೈಪೊಟಿ ಮಾಡಿದ್ದರು. ಎರಡೂ ಬಣದ ನಡುವೆ ಪೈಪೊಟಿ ತೀವ್ರಗೊಂಡಾಗ ಹೈಕಮಾಂಡ್ ಮೂರನೇ ಅಭ್ಯರ್ಥಿಗೆ ಮಣೆಹಾಕಿ ಗೌತಮ್ ಅವರಿಗೆ ಟಿಕೆಟ್ ನೀಡಿತು.
ಕಾಂಗ್ರೆಸ್ ಟಿಕೆಟ್ ಪಡೆದ ಗೌತಮ್ ಅವರು ಗೋ ಬ್ಯಾಕ್ ಪ್ರತಿಭಟನೆ ಎದುರಿಸಬೇಕಾದ ಪ್ರಸಂಗ ಉಂಟಾಯಿತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಪಡೆದ ಜಯಪ್ರಕಾಶ್ ಹೆಗ್ಡೆ ಕೂಡ ಗೋ ಬ್ಯಾಕ್ ಪ್ರತಿಭಟನೆ ಎದುರಿಸಬೇಕಾಯಿತು.
ಬಿಜೆಪಿಯಿಂದ ಈಗಷ್ಟೇ ಕಾಂಗ್ರೆಸ್ಗೆ ಬಂದವರಿಗೆ ಟಿಕೆಟ್ ಬೇಡ ಎಂದು ಅಸಮಾಧಾನ ಗೊಂಡ ಸ್ಥಳೀಯ ಕಾರ್ಯಕರ್ತರು ಗೋಬ್ಯಾಕ್ ಜಯಪ್ರಕಾಶ್ ಹೆಗ್ಡೆ ಎಂದು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದು ಕಂಡುಬಂತು. ಬಾಗಲಕೋಟೆಯಲ್ಲಿ ಸಂಯುಕ್ತ ಪಾಟೀಲ್ ವಿರುದ್ಧವೂ ಗೋಬ್ಯಾಕ್ ಘೋಷಣೆ ಕೇಳಿಬಂದವು.
ಇಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡ ಬೆಂಬಲಿಗರು ಸಂಯುಕ್ತ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇತ್ತ ತುಮಕೂರಿನಲ್ಲಿ ಸೋಮಣ್ಣನವರು ಹೊರಗಿನವರು ಎಂದು ಗೋ ಬ್ಯಾಕ್ ಪ್ರತಿಭಟನೆ ನಡೆಸಲಾಗಿತ್ತು. ಇದೇ ರೀತಿ ಹಲವೆಡೆ ಗೋ ಬ್ಯಾಕ್ ಪ್ರತಿಭಟನೆಗಳು ನಡೆದಿದ್ದು ಈ ಬಾರಿ ಯ ವಿಶೇಷ.