ನವದೆಹಲಿ,ಮಾ.23– ಒಡಿಶಾ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾ ಣದ ಬಂಗಾರದ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಒಡಿಶಾದ ಗಣಿಗಾರಿಕೆ ಸಚಿವ ಬಿಭೂತಿ ಭೂಷಣ್ ಜೇನಾ ಹೇಳಿದ್ದಾರೆ.
ಜೇನಾ, ಒಡಿಶಾ ಖನಿಜಗಳ ಸಂಪತ್ತು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಲಿದೆ. ಈಗಾಗಲೇ ಸುಂದರ್‌ಗಢ, ನಬರಂಗಪುರ, ಅಂಗುಲ ಮತ್ತು ಕೊರಾಪುತ್‌ನಲ್ಲಿ ದೊಡ್ಡ ಮಟ್ಟದ ಚಿನ್ನದ ನಿಕ್ಷೇಪ ಇರುವುದು ಗೊತ್ತಾಗಿದೆ. ಆರಂಭಿಕ ಸರ್ವೇಗಳನ್ನು ನಡೆಸಲು ಆದೇಶ ನೀಡಲಾಗಿದೆ. ಇನ್ನು ಮಲ್ಕನ್‌ಗಿರಿ, ಸಂಭಾಲ್‌ಪುರ ಮತ್‌ತು ಬೌಧ್ ಜಿಲ್ಲೆಗಳಲ್ಲೂ ಕೂಡ ಚಿನ್ನದ ನಿಕ್ಷೇಪ ಇರುವುದರ ಬಗ್ಗೆ ಸೂಚನೆಗಳಿವೆ ಎಂದು ಹೇಳಿದ್ದಾರೆ.
ಜಾಶಿಪುರ್, ಸುರಿಯಾಗುಡಾ, ರೌನ್ಸಿ, ಇಡೆಲ್ಕುಚಾ, ಮರೆದಿಹಿ, ಸುಲೆಪಾತ್ ಮತ್ತು ಬಾದಂಪಹರ್‌ನಲ್ಲಿಯೂ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಚಿನ್ನದ ನಿಕ್ಷೇಪ ಇರುವುದನ್ನು ಪತ್ತೆಹಚ್ಚಿದೆ. ಇನ್ನು ಅದಾಸಾ-ರಾಂಪಲ್ಲಿ ಪ್ರದೇಶದಲ್ಲಿ ಅಪಾರ ತಾಮ್ರದ ನಿಕ್ಷೇಪ ಇರುವುದು ಕೂಡ ಕಂಡು ಬಂದಿದೆ.
ಈಗಾಗಲೇ ಕಿಯೋಂಜಾರ್ ಜಿಲ್ಲೆಯ ಗೋಪುರ-ಗಾಜಿಪುರ, ಮನ್ಕಂದಚೌನ್ ಸಾಲೇಕನಾ ಮತ್ತು ಡಿಮಿರಿಮುಮಂಡಾ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ಇರುವುದು ಗೊತ್ತಾಗಿದೆ. ಒಡಿಶಾ ಈಗಾಗಲೇ ಗಣಿಗಾರಿಕೆ ಹರಾಜು ಪ್ರಕ್ರಿಯೆಯ ಸಿದ್ಧತೆಯಲ್ಲಿದೆ. ಇದು ಒಡಿಶಾದ ಗಣಿಗಾರಿಕೆ ವಿಭಾಗದಲ್ಲಿಯೇ ಅತಿದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಲಿದೆ.
ಜಿಎಸ್‌ಐ ಮತ್ತು ಒಡಿಶಾದ ಗಣಿಗಾರಿಕಾ ಸಂಸ್ಥೆ ಸೇರಿಕೊಂಡು ಕೆಲವು ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ಇರುವುದರ ಬಗ್ಗೆ ಹುಡುಕಾಟವನ್ನು ಶುರ ಮಾಡಿದೆ. ಜಿಎಸ್‌ಐ ಹೇಳುವ ಪ್ರಕಾರ ದಿಯೋಗಢದ ಜಾಲಾದಿಲ್ ಪ್ರದೇಶದಲ್ಲಿ ಅಪಾರ ಪ್ರಮಾಣವಾದ ಚಿನ್ನ ಹಾಗೂ ತಾಮ್ರದ ನಿಕ್ಷೇಪಗಳು ಇರುವ ನಿರೀಕ್ಷೆ ಇದೆ ಎಂದು ಹೇಳಿದೆ.