ತಿರುಮಲ,ಜ.22- ಕರ್ನಾಟಕ ಸರ್ಕಾರ ತಿರುಮಲಕ್ಕೆ ತಿರುಪತಿ ತಿಮಪ್ಪನ ದರ್ಶನಕ್ಕಾಗಿ ಭೇಟಿ ನೀಡುವ ಯಾತ್ರಾರ್ಥಿಗಳಿಗೆ 200 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೂರು ವಸತಿ ಸಂಕೀರ್ಣಗಳು, ಒಂದು ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ಹಾಲಿ ಇದ್ದ ಪ್ರವಾಸಿ ಸೌಧವನ್ನು ಉನ್ನತೀಕರಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ.
ಈಗಾಗಲೇ 110 ಎಸಿ ಕೊಠಡಿಗಳ ಬ್ಲಾಕ್ -2 ( ಹಂಪಿ ಬ್ಲಾಕ್) ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಲೋಕಾರ್ಪಣೆಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಛತ್ರದಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ಸಂಕೀರ್ಣಗಳ ಪೈಕಿ 132 ಹವಾನಿಯಂತ್ರಣರಹಿತ ಕೊಠಡಿಗಳನ್ನು ಹೊಂದಿರುವ ಐಹೊಳೆ ಬ್ಲಾಕ್ ಕಟ್ಟಡವನ್ನು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದ್ದಾರೆ.
ಈ ಕಟ್ಟಡದಲ್ಲಿನ ಪ್ರತಿ ಕೊಠಡಿಗಳಿಗೆ 24 ಗಂಟೆಗಳ ಅವಧಿಗೆ ಕೊಠಡಿ ನಿರ್ವಹಣಾ ಶುಲ್ಕ ರೂ.1350/- (+ಜಿಎಸ್‌ಟಿ) ನಿಗದಿಪಡಿಸಿದ್ದು, ಕಡಿಮೆ ಬೆಲೆಯಲ್ಲಿ ಸುಸಜ್ಜಿತ ಕೊಠಡಿಗಳನ್ನು ಯಾತ್ರಾರ್ಥಿಗಳಿಗೆ ಒದಗಿಸುವ ಮೂಲಕ ಅನುಕೂಲ ಮಾಡಿಕೊಡಲಾಗಿದೆ.
ನೂತನವಾಗಿ ತಿರುಮಲದಲ್ಲಿ ನಿರ್ಮಿಸಲಾಗಿರುವ ವಸತಿ ಸಂಕೀರ್ಣ ಮತ್ತು ಶ್ರೀ ಕೃಷ್ಣದೇವರಾಯ ಬ್ಲಾಕ್‌ನಲ್ಲಿನ 36 ಹವಾ ನಿಯಂತ್ರಿತ ಸೂಟ್‌ಗಳನ್ನು ಹಾಗೂ 500 ಆಸನಗಳ ಸಾಮರ್ಥ್ಯವುಳ್ಳ ತಿರುಮಲದಲ್ಲಿಯೇ ಬೃಹತ್ ಹಾಗೂ ನವೀನ ಮಾದರಿಯ ಸುಸಜ್ಜಿತ ಕಲ್ಯಾಣ ಮಂಟಪವಾದ ಶ್ರೀ ಕೃಷ್ಣ ಒಡೆಯರ್ ಬ್ಲಾಕ್ ಕಟ್ಟಡಗಳ ಕಾಮಗಾರಿ ಮುಕ್ತಾಯಗೊಂಡಿದ್ದು, ಅಂತಿಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ.
ತಿರುಪತಿ ಹಾಗೂ ತಿರುಚಾನೂರಿನಲ್ಲಿ ಕರ್ನಾಟಕ ರಾಜ್ಯ ಛತ್ರದಲ್ಲಿ ಹಾಲಿ ಇರುವ 24 ಕೊಠಡಿಗಳನ್ನು ಮತ್ತು ಕಲ್ಯಾಣ ಮಂಟಪಗಳನ್ನು ನವೀಕರಣಗೊಳಿಸಿ, ಯಾತ್ರಾರ್ಥಿಗಳಿಗೆ ಹಂಚಿಕೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯ ಛತ್ರದಲ್ಲಿ 50 ಸುಸಜ್ಜಿತ ಕೊಠಡಿಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ನೂತನ ಕಟ್ಟಡವನ್ನು ನಿರ್ಮಿಸಲು ಯೋಜನೆ ಸಿದ್ಧಗೊಳಿಸಲಾಗುತ್ತಿದೆ.
ಕಲ್ಯಾಣ ಮಂಟಪ ಬ್ಲಾಕ್ ಹಾಗೂ ವಿವಿಐಪಿ ಕೊಠಡಿಗಳ ಬ್ಲಾಕ್ 2025ರ ಏಪ್ರಿಲ್ ಅಥವಾ ಮೇ ಮಾಹೆಯಲ್ಲಿ ಸಂಪೂರ್ಣವಾಗಿ ಪೂರ್ಣಗೊಳ್ಳಲಿದ್ದು, ಸದರಿ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಸಿಎಂ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳ ಸಮುಖದಲ್ಲಿ ನೆರವೇರಿಸಲಾಗುವುದು.
ಧಾರ್ಮಿಕ ದತ್ತಿ ಇಲಾಖೆಯ ಕರ್ನಾಟಕ ದೇವಾಲಯಗಳ ವಸತಿ ಕಾಯ್ದಿರಿಸುವಿಕೆಯ ವೆಬ್ಸೈಟ್ Karnatakatemplesaccommodation.com ಮೂಲಕ ಶೇ.60% ರಷ್ಟು ಆನ್‌ಲೈನ್ ಮೂಲಕ ಹಾಗೂ ಶೇ.40% ಆಫ್‌ಲೈನ್ ಮೂಲಕ ಕೊಠಡಿಗಳನ್ನು ಹಂಚಿಕೆ ಮಾಡಿ ಅನುಕೂಲ ಮಾಡಿಕೊಡಲಾಗುತ್ತಿದೆ.