ಬೆಂಗಳೂರು,ಅ.9- ಹೊಸ ಮನೆ ಕಟ್ಟಿ ವಿದ್ಯುತ್ ಸಂಪರ್ಕ ಸಿಗದೆ ಪರದಾಡುತ್ತಿರುವ ನಾಗರಿಕರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್ ಸಿಗುವ ಸಾಧ್ಯತೆಗಳಿವೆ. 1200 ರಿಂದ 2400 ಚದುರಡಿ ಸುತ್ತಳತೆಯಲ್ಲಿ ನಿರ್ಮಿಸಿರುವ ಹೊಸ ಮನೆಗಳಿಗೆ ಓಸಿ ಮತ್ತು ಸಿಸಿ ಇಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಅನುಕೂಲ ಮಾಡಿಕೊಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಹೊಸದಾಗಿ ನಿರ್ಮಿಸುವ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಜಿಬಿಎ ಇಂದ ಕ್ಲಿಯರೆನ್‌್ಸ ಸರ್ಟಿಫಿಕೇಟ್ (ಸಿಸಿ) ಹಾಗೂ ಓಸಿ ಪಡೆದುಕೊಳ್ಳಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿತ್ತು.
ಆದರೆ, ಹೊಸ ನಿಯಮದಡಿ ವಿದ್ಯುತ್ ಸಂಪರ್ಕ ಪಡೆಯಲು ಆಗದೆ ಸಾರ್ವಜನಿಕರು ಪರದಾಡುವಂತಾಗಿತ್ತು. ನಂತರ ಸರ್ಕಾರ 1200 ಚದುರಡಿ ಸುತ್ತಳತೆಯಲ್ಲಿ ನಿರ್ಮಿಸುವ ಮನೆಗಳಿಗೆ ಓಸಿ, ಸಿಸಿ ಇಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಭರವಸೆ ನೀಡಿತ್ತು. ನಂತರ ಅದಕ್ಕೂ ಅವಕಾಶ ಕಲ್ಪಿಸಿರಲಾಗಿರಲಿಲ್ಲ, ಇದೀಗ ಸಾರ್ವಜನಿಕರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ 2400 ಚದುರಡಿಯಲ್ಲಿ ನಿರ್ಮಿಸಿರುವ ಮನೆಗಳಿಗೂ ಓಸಿ, ಸಿಸಿ ಇಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಸಾರ್ವಜನಿಕರ ನೆರವಿಗೆ ಧಾವಿಸಲು ಮುಂದಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಿನ್ನೆ ನಡೆದಿದ್ದ ಸಭೆಯಲ್ಲಿ 2400 ಚದುರಡಿವರೆಗಿನ ಮನೆಗಳಿಗೆ ಸಿಸಿ ಮತ್ತು ಓಸಿ ವಿನಾಯಿತಿ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಚೆನ್ನೈ ಮಾದರಿಯಲ್ಲಿ ವಿನಾಯಿತಿ ನೀಡುವ ಕುರಿತು ಬಹುತೇಕ ನಿರ್ಧಾರ ಮಾಡಲಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಇಂದೇ ಸಂಪುಟದಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.
ಚನೈ ನಲ್ಲಿ 2400 ಚದುರಿಡಿವರೆಗೂ ಸಿಸಿ , ಓಸಿಗೆ ವಿನಾಯಿತಿ ಇದೆ 2400 ಅಡಿಯಲ್ಲಿ ನಿರ್ಮಾಣವಾದ ಜೊತೆಗೆ 7200 ಅಡಿವರೆಗಿನ ಕಟ್ಟಡಗಳಿಗೂ ವಿನಾಯಿತಿ ನೀಡಲಾಗಿದೆ ಅದೇ ಮಾದರಿಯಲ್ಲಿ 2400 ಚದುರಡಿ ನಿವೇಶನದಲ್ಲಿ ನಿರ್ಮಾಣ ಮಾಡಿರುವ ಗ್ರೌಂಡ್ + ಎರಡಂತಸ್ತಿನ ಕಟ್ಟಡಗಳಿಗೆ ವಿನಾಯಿ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ಹೊರತು ಪಡಿಸಿದ ಕೇವಲ ವಸತಿ ಉದ್ದೇಶಿತ ಕಟ್ಟಡಗಳಿಗೆ ವಿನಾಯಿತಿ ನೀಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ.