ನವದೆಹಲಿ, ಮಾ.22- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಇಂದಿನಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗೂಗಲ್ ವಿಶೇಷ ಡೂಡಲ್ ಮೂಲಕ, ಐಪಿಎಲ್ ಉದ್ಘಾಟನೆಯ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿದೆ. ಕಳೆದ ವರ್ಷದಂತೆ, 90 ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ 10 ತಂಡಗಳು ಸ್ಪರ್ಧಿಸುತ್ತಿವೆ. ಉದ್ಘಾಟನಾ ಸಮಾರಂಭವು ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿದೆ.
ಮೊದಲ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಗೂಗಲ್ ಡೂಡಲ್‌ನಲ್ಲಿ ಬ್ಯಾಟ್ಸ್‌ಮನ್ ಚೆಂಡನ್ನು ಹೊಡೆಯುವುದನ್ನು ತೋರಿಸಲಾಗಿದೆ.
ಡೂಡಲ್ ಮೇಲೆ ಕ್ಲಿಕ್ ಮಾಡುವುದರಿಂದ ಪಂದ್ಯದ ವೇಳಾಪಟ್ಟಿ, ತಂಡದ ಲೈನ್-ಅಪ್‌ಗಳು ಮತ್ತು ಸಮಯ ಸೇರಿದಂತೆ ಎಲ್ಲಾ ಐಪಿಎಲ್ ವಿವರಗಳು ತೆರೆದುಕೊಳ್ಳುತ್ತದೆ. ಯಾವ ತಂಡಗಳು ಪಂದ್ಯವನ್ನು ಆಡುತ್ತವೆ ಮತ್ತು ಯಾವ ಸಮಯದಲ್ಲಿ ಪಂದ್ಯವನ್ನು ಆಯೋಜಿಸಲಾಗಿದೆ. ಮುಂದೆ ನಡೆಯಲಿರುವ ಪಂದ್ಯ ಸೇರಿದಂತೆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಿದೆ.
ಡೂಡಲ್ ಕೆಳಭಾಗದಲ್ಲಿ, ಐಪಿಎಲ್ ಸಂಬಂಧಿತ ಸುದ್ದಿಗಳು, ಐಪಿಎಲ್ ನ ಅಧಿಕೃತ ವೆಬ್‌ಸೈಟ್, ಐಪಿಎಲ್ ನ ಎಕ್ಸ್ ಹ್ಯಾಂಡಲ್, ಐಪಿಎಲ್ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮುಂತಾದ ಮಾಹಿತಿಯನ್ನು ನೀಡಲಾಗಿದೆ. ಒಟ್ಟಾರೆಯಾಗಿ, ಗೂಗಲ್ ಡೂಡಲ್ ಐಪಿಎಲ್ ಆರಂಭವನ್ನು ಆಚರಿಸುವುದಲ್ಲದೆ, ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸುವ ಮೂಲಕ ಪ್ರಸ್ತುತಪಡಿಸುತ್ತಿದೆ.