ಬೆಂಗಳೂರು,ಮೇ24- ಕರ್ನಾಟಕದಲ್ಲಿನ ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಸಾರ್ಟ್‌ಫೋನ್ ಮತ್ತು ಡ್ರೋಣ್ ಉತ್ಪಾದಿಸಲು ಮುಂದಾಗಿದ್ದ ಗೂಗಲ್ ಇದೀಗ ಶತಕೋಟಿ ಬಂಡವಾಳ ಹೂಡಿಕೆಯಿಂದ ಹಿಂದೆ ಸರಿದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಾರ್ಟ್‌ಫೋನ್ ಮತ್ತು ಡ್ರೋಣ್ ಉತ್ಪಾದನೆ ಮಾಡುವ ಕ್ಷೇತ್ರದಲ್ಲಿ ಗೂಗಲ್ ಶತಕೋಟಿ ಬಂಡವಾಳ ಹೂಡಿಕೆಯಿಂದ ಹಿಂದೆಸರಿದು ತಮಿಳುನಾಡಿನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಜಯೇಂದ್ರ, ಕರ್ನಾಟಕವು ತನ್ನ ದುರಾಡಳಿತ ಮತ್ತು ತಪ್ಪಾದ ಆದ್ಯತೆಗಳಿಂದ ರಾಜ್ಯವನ್ನು ವಿಪತ್ತಿನತ್ತ ಕೊಂಡೊಯ್ಯುವ ಮತ್ತು ದಿಕ್ಕಿಲ್ಲದ ರೀತಿಯಲ್ಲಿ ತನ್ನ ದಾರಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಜಡ, ನಿದ್ರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನೇರ ಪರಿಣಾಮಗಳನ್ನು ಹೊಂದುತ್ತಿದೆ ಎಂದು ದೂರಿದ್ದಾರೆ.
ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಭಾರತ ಯಶಸ್ವಿಯಾಗಿದ್ದರೆ, ಕರ್ನಾಟಕವನ್ನು ಉನ್ನತ ಹೂಡಿಕೆಯ ತಾಣ ಎಂದು ತೋರಿಸುವಲ್ಲಿ ಮತ್ತು ಹೂಡಿಕೆದಾರರಲ್ಲಿ ವಿಶ್ವಾಸವನ್ನು ತುಂಬುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈತ್ರಿಕೂಟದ ಪಾಲುದಾರ ಡಿಎಂಕೆ ಪರವಾಗಿ ನಮ ಪಾಲಿನ ಕಾವೇರಿ ನೀರನ್ನು ರಕ್ಷಿಸಲು ಸಾಧ್ಯವಾಗದೆ ಕರ್ನಾಟಕದ ರೈತರನ್ನು ಹಾಳು ಮಾಡಿದ್ದು ಇದೇ ಸರ್ಕಾರ. ಬಹು ಶತಕೋಟಿ ಡಾಲರ್ ಹೂಡಿಕೆಗಳು ತಮಿಳುನಾಡಿಗೆ ದಾರಿ ಮಾಡಿಕೊಡುವುದರೊಂದಿಗೆ ಅದೇ ಟ್ರೆಂಡ್ ಮುಂದುವರೆಯುವುದರಲ್ಲಿ ಆಶ್ಚರ್ಯವಿಲ್ಲ ಎಂದು ಟೀಕೆ ಮಾಡಿದ್ದಾರೆ.