ಬೆಂಗಳೂರು,ಆ.20- ಧಾರ್ಮಿಕ ಹಬ್ಬ, ಉತ್ಸವಗಳ ಆಚರಣೆಗೆ ಕುರಿತಂತೆ ಕಾನೂನು ಪಾಲನೆ ಜೊತೆಗೆ ಸಂಪ್ರದಾಯದ ಭಾವನೆಗೆ ಧಕ್ಕೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವು ಶಾಸಕರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ನಿಮ ಅಥವಾ ನಮ ಸರ್ಕಾರ ಕೇಂದ್ರ ಸರ್ಕಾರ ಯಾವುದೇ ಆದರೂ ಕಾನೂನು ಪಾಲನೆ ಮಾಡಲೇಬೇಕು.
ರಾತ್ರಿ 10 ನಂತರ ಚುನಾವಣಾ ಪ್ರಚಾರ, ಸಭೆ ಸಮಾರಂಭ, ಹೆಚ್ಚು ಸದ್ದು ಮಾಡುವುದನ್ನು ನಿಷೇಧ ಇದೆ. ಕೆಲವೆಡೆ ಸಂಪ್ರದಾಯಿಕ ಆಚರಣೆಗಳಿಗೆ ಅವಕಾಶವಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಅಡಚಣೆಯಾಗುವಂತಹ ಕಡೆಗಳಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ವಿಚಾರದ ಬಗ್ಗೆ ಗೃಹಸಿಚವರು ಹಾಗೂ ಕಾನೂನು ಸಚಿವರ ಗಮನಕ್ಕೆ ತಂದು ಸೂಕ್ತ ಉತ್ತರ ಕೊಡಿಸುವ ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ವೇದವ್ಯಾಸ ಕಾಮತ್, ದ.ಕನ್ನಡ ಜಿಲ್ಲೆಗಳಲ್ಲಿ ಹಬ್ಬ ಹರಿದಿನಗಳನ್ನಾಚರಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ತೊಂದರೆಯಾಗುತ್ತಿದೆ. ಕೃಷ್ಣ ಜನಾಷ್ಠಮಿ ಸಂದರ್ಭದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಧ್ವನಿ ಯಂತ್ರಗಳನ್ನು ಪೊಲಿಸರು ಕಸಿದು ಹೋಗಿದ್ದಾರೆ, ಕೇಸು ಹಾಕಿದ್ದಾರೆ.ರಾತ್ರಿ 10 ಗಂಟೆ ನಂತರ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಕೇಳಿದರೆ ನ್ಯಾಯಾಲಯದ ಆದೇಶ, ಸರ್ಕಾರದ ಆದೇಶ ಎನ್ನುತ್ತಾರೆ. ನಮ ಸರ್ಕಾರವಿದ್ದಾಗ ಯಾವ ತೊಂದರೆಯೂ ಇರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತಿದೆ. ಗಣೇಶೋತ್ಸವ, ನವರಾತ್ರಿ ಉತ್ಸವ ಬರುತ್ತಿದೆ. ಈ ಸಂದರ್ಭದಲ್ಲಿ ಆಚರಣೆಗೆ ಅಡ್ಡಿಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಚಿವ ಚಲುವರಾಯಸ್ವಾಮಿ ಮಾತನಾಡಿ, ಪಕ್ಷದ ಬಗ್ಗೆ ಮಾತನಾಡುವುದು ಬೇಡ, ಸರ್ಕಾರದ ಬಗ್ಗೆ ಹೇಳಿ. ಜವಾಬ್ದಾರಿಯಿಂದಲೇ ಉತ್ತರ ಕೊಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗೊಂದಲದ ವಾತಾವರಣ ಉಂಟಾಯಿತು.
ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಪರಸ್ಪರ ಚರ್ಚೆ ಬೇಡ, ಪರಿಹಾರ ಬೇಕು. ಕಾನೂನು ಮತ್ತು ಸಂಪ್ರದಾಯ ಎರಡೂ ಇವೆ. ಇವೆರೆಡರ ನಡುವೆ ಪರಿಹಾರ ಕಂಡುಕೊಳ್ಳಬೇಕು. ಆರೋಪ ಮತ್ತು ಪ್ರತ್ಯಾರೋಪದ ಚರ್ಚೆ ಮಾಡುವುದರಿಂದ ಪರಿಹಾರ ಸಿಗುವುದಿಲ್ಲ, ಅನಗತ್ಯ ಗೊಂದಲ ಬೇಡ. ಕಾನೂನು ಬದಲಾಯಿಸಬಹುದು ಆದರೆ ಸಂಪ್ರದಾಯ ಬದಲಿಸಲು ಆಗದು ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಅಶೋಕ್ ಮಾತನಾಡಿ, ಕಾನೂನು ಮತ್ತು ಸಂಪ್ರದಾಯ ಎರಡೂ ಇವೆ. ಕರಾವಳಿ ಭಾಗದಲ್ಲಿ ಕೋಲ ಶುರುವಾಗುವುದೇ 10 ಗಂಟೆ ನಂತರ. ಗಣೇಶ ಹಬ್ಬ ಆಚರಣೆಯನ್ನು ರಸ್ತೆರಸ್ತೆಗಳಲ್ಲಿ ಮಾಡುತ್ತಾರೆ. ಕಳೆದ ಬಾರಿ ಮಂಡ್ಯ ಜಿಲ್ಲೆಯಲ್ಲಿ ಗಣೇಶನನ್ನೇ ಬಂಧಿಸಿದ್ದರು. ಕೇವಲ ಬಿಜೆಪಿಯವರು ಆಚರಣೆ ಮಾಡುವುದಲ್ಲ. ಎಲ್ಲರೂ ರಸ್ತೆ ಬೀದಿಗಳಲ್ಲಿ ಆಚರಣೆ ಮಾಡುತ್ತಾರೆ. ಉರುಸ್ ಅನ್ನೂ ಮಾಡುತ್ತಾರೆ. ಸರ್ಕಾರ ಕಿವುಡು, ಕುರುಡಾಗಿದೆ. ಕನ್ನಡಕ ಹಾಕಿ ಕಾಣುವಂತೆ ಮಾಡಿ ಎಂದು ಛೇಡಿಸಿದರು.
ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಸಂಭ್ರಮದಿಂದ ಆಚರಣೆ ಮಾಡಬೇಕಾದ ಹಬ್ಬ, ಉತ್ಸವದ ಸಂದರ್ಭಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಕಡ್ಡಾಯವಾಗಿ ಸಿಸಿಟಿವಿ ಹಾಕಬೇಕು ಎಂಬ ಷರತ್ತನ್ನು ಪೊಲೀಸರು ಹಾಕುತ್ತಾರೆ.ಬಿಜೆಪಿಯ ಹಿರಿಯ ಶಾಸಕ ವಿ.ಸುನಿಲ್‌ಕುಮಾರ್ ಮಾತನಾಡಿ, ಸರ್ಕಾರಿ ಶಾಲೆ ಆವರಣದಲ್ಲಿ ಗಣೇಶೋತ್ಸವಕ್ಕೆ ಅವಕಾಶವಿಲ್ಲ ಎಂಬ ಸುತ್ತೋಲೆ ಹೊರಡಿಸಲಾಗಿದೆ. ಬಹಳಷ್ಟು ಕಡೆಗಳಲ್ಲಿ ಸರ್ಕಾರಿ ಶಾಲಾ ಆವರಣದಲ್ಲೇ ಈ ಆಚರಣೆ ನಡೆಸುವ ಸಂಪ್ರದಾಯವಿದ್ದು, ಈ ಸುತ್ತೋಲೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ತುಳುವಿನಲ್ಲೇ ಸಮಸ್ಯೆಯನ್ನು ಪ್ರಸ್ತಾಪಿಸಿದರು.
ವಾಗ್ವಾದ :
ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಮಾತನಾಡಿ, ರಾತ್ರಿ 11 ಗಂಟೆ ನಂತರ ಅಜಾನ್ ಕೂಗುವುದನ್ನು ನಿಲ್ಲಿಸಬೇಕು. ಶಬ್ದಮಾಲಿನ್ಯವಾಗುತ್ತದೆ. ಇದನ್ನು ನಿಲ್ಲಿಸಬೇಕು ಎಂದು ಬಿಜೆಪಿಯವರೇ ಆಗ್ರಹಿಸಿದರು. ಧಾರ್ಮಿಕ ಆಚರಣೆಗೂ ಕಾನೂನು ಪಾಲನೆಯಾಗಬೇಕು. ಈ ವಿಚಾರ ಕಾನೂನು ಬಾಹಿರವಾಗಿದ್ದು, ಚರ್ಚೆ ಮಾಡುವುದೇ ತಪ್ಪು ಎಂದರು.ಆಗ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ, ಮಾತಿನ ಚಕಮಕಿ ಕೆಲಕಾಲ ನಡೆಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ನಾವು ಕಾನೂನು ಪಾಲನೆ ಮಾಡುತ್ತೇವೆ. ಆಜಾನ್ ಕೂಗುವುದನ್ನು ನಿಲ್ಲಿಸಿ, ಕಾನೂನು ಗೌರವಿಸುವ ಸರ್ಕಾರವನ್ನು ನಾವು ಸ್ವಾಗತಿಸುತ್ತೇವೆ. ಮಳವಳ್ಳಿಯ ಯಾವ ಮಸೀದಿಯಲ್ಲೂ ಅಜಾನ್ ಘೋಷಣೆಗೆ ಅವಕಾಶ ಕೊಡಲ್ಲ ಎಂದು ನರೇಂದ್ರ ಸ್ವಾಮಿ ಹೇಳಲಿ ಎಂದು ಛೇಡಿಸಿದರು.ಆಗ ನರೇಂದ್ರ ಸ್ವಾಮಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಉತ್ತರ ಕೊಡುವುದು ಗೊತ್ತು ಎಂದು ತಿರುಗೇಟು ನೀಡಿದರು.ಸಭಾಧ್ಯಕ್ಷರ ಮಧ್ಯಪ್ರವೇಶದಿಂದ ಈ ವಿಚಾರಕ್ಕೆ ತೆರೆ ಬಿದ್ದಿತು.