ಬೆಳಗಾವಿ,ಡಿ.26- ಕಾಂಗ್ರೆಸ್ನ ಮಹಾಧಿವೇಶನ ಶತಮಾನೋತ್ಸವ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಹಿನ್ನೆಲೆಯಲ್ಲಿ ಸಂಪುಟದ ಎಲ್ಲಾ ಸಚಿವರು ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದು, ಇಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಸರಣಿ ಕಾರ್ಯಕ್ರಮಗಳು ನಿರಂತರವಾಗಿ ನಡೆದವು.
ಜಮು-ಕಾಶೀರದಲ್ಲಿ ಅಪಘಾತದಲ್ಲಿ ಮೃತಪಟ್ಟ ಯೋಧರಾದ ಸುಬೇದಾರ್ ದಯಾನಂದ ತಿರುಕಣ್ಣನವರ್, ಮಹೇಶ್ ಮಾರಿಕೊಂಡ ಅವರ ಪಾರ್ಥಿವ ಶರೀರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಎಐಸಿಸಿ ಕಾರ್ಯಕಾರಿಣಿ ಸಭೆ ನಡೆಯುವ ಟಿಳಕವಾಡಿಯ ವೀರಸೌಧದ ಸಾರ್ವಜನಿಕ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಮಹಾತ ಗಾಂಧೀಜಿಯವರ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರಕ ನೂಲುವ ಮೂಲಕ ಉದ್ಘಾಟಿಸಿದರು.
ನಂತರ ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವನ್ನು ಉದ್ಘಾಟಿಸಲಾಯಿತು. ಈ ವೇಳೆ ಮುಖ್ಯಮಂತ್ರಿಯವರು ತಮಗೆ ಪಂಚೆ, ಶಲ್ಯ ಹಾಗೂ ಕುರ್ತಾದ ಬಟ್ಟೆಗಳನ್ನು ಖರೀದಿಸಿದರೆ, ಡಿ.ಕೆ.ಶಿವಕುಮಾರ್ರವರು ಸೀರೆ ಖರೀದಿಸಿದರು.
ಸುವರ್ಣಸೌಧದ ಆವರಣದಲ್ಲಿ ನಿರ್ಮಿಸಲಾಗಿರುವ ವಿಜ್ಞಾನವನವನ್ನು ಉದ್ಘಾಟಿಸಲಾಯಿತು. ವಿಧಾನಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಹೊರಟ್ಟಿಯವರ ಹೆಸರನ್ನು ಶಬ್ದ ಪ್ರತಿಧ್ವನಿಸುವ ಉಪಕರಣದಲ್ಲಿ ಹಲೋ ಹೊರಟ್ಟಿ ಎಂದು ಕೂಗುವ ಮೂಲಕ ಸಿದ್ದರಾಮಯ್ಯ ಹಾಸ್ಯಚಟಾಕಿ ಹಾರಿಸಿದರು.
ಇದೇ ವೇಳೆ ಸುವರ್ಣ ಸೌಧವನ್ನು ಸ್ವಚ್ಛಗೊಳಿಸುವ ಸಿಬ್ಬಂದಿಗಳ ಜೊತೆ ಸಾಮೂಹಿಕ ಫೋಟೋ ತೆಗೆಸಿಕೊಳ್ಳಲಾಯಿತು. ಸೈನ್ಸ್ ಪಾರ್ಕ್ನಲ್ಲಿ ಅಳವಡಿಸಲಾಗಿದ್ದ ಟೆಲಿಸ್ಕೋಪ್ಗಳನ್ನು ಸಿದ್ದರಾಮಯ್ಯ ಕುತೂಹಲದಿಂದ ವೀಕ್ಷಿಸಿದರು.
ಈ ವೇಳೆ ಸ್ವಚ್ಛತಾ ಸಿಬ್ಬಂದಿಗಳು ಸಿದ್ದರಾಮಯ್ಯನವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ನಂತರ ಬೆಳಗಾವಿ ವಿಮಾನನಿಲ್ದಾಣಕ್ಕೆ ಬಂದಿಳಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ಗಾಂಧಿಯವರನ್ನು ಸಿಎಂ, ಡಿಸಿಎಂ ಇಬ್ಬರೂ ಆತೀಯವಾಗಿ ಬರಮಾಡಿಕೊಂಡರು. ಸಚಿವರ ಜೊತೆಗೆ ನೂರಾರು ಕಾರ್ಯಕರ್ತರು ಜಮಾಯಿಸಿ ಅದ್ಧೂರಿ ಸ್ವಾಗತ ಕೋರಿದರು.
ಮಧ್ಯಾಹ್ನ ನಡೆದ ಎಐಸಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು ಭಾಗವಹಿಸಿ ಸಂಘಟನೆಯ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.ಸಂಪುಟದ ಎಲ್ಲಾ ಸಚಿವರು, ಪಕ್ಷದ ಪ್ರಮುಖ ಪದಾಧಿಕಾರಿಗಳು, ಶಾಸಕರು, ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದು, ಕುಂದಾನಗರಿಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.