ಬೆಂಗಳೂರು, ಜ.27- ರಾಜ್ಯದ ಕಾಂಗ್ರೆಸ್ ಸರ್ಕಾರದ ದಿವಾಳಿಯಾಗಿದ್ದು, ಮೈಕ್ರೋಫೈನಾನ್ಸ್ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಮೀಟರ್ ಬಡ್ಡಿ ಮಾಫಿಯಾ ತಲೆ ಎತ್ತಿದೆ. ಈವರೆಗೆ 14 ಜನರು ಆತಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರ ಬಂದ ಮೇಲೆ ಎಲ್ಲಾ ಜಿಲ್ಲೆಗಳಲ್ಲೂ ಮೀಟರ್ ಬಡ್ಡಿ ಗೂಂಡಾಗಳಿಗೆ ದೌರ್ಜನ್ಯ ಮಾಡಿ ವಸೂಲಿ ಮಾಡೋ ಕೆಲಸ ಸಿಕ್ಕಿದೆ ಎಂದು ವಾಗ್ದಾಳಿ ನಡೆಸಿದರು.
ಶೇ.60 ರಷ್ಟು ಕಮಿಷನ್ ಮಾಫಿಯಾದಲ್ಲಿ ಸರ್ಕಾರಸಿಕ್ಕಿಹಾಕಿಕೊಂಡು ಒದ್ದಾಡುತ್ತಿದೆ. ನಿಮ ಗ್ಯಾರಂಟಿ ಪ್ರತಿಫಲ ರಾಜ್ಯದಲ್ಲಿ ನೋಡುತ್ತಿದ್ದೀರಿ. ಮುಂದಿನ ಬಜೆಟ್, ತೆರಿಗೆಯ ಹೊರೆಯ ಬಜೆಟ್ ಆಗಲಿದೆ ಎಂದು ಅವರು ಟೀಕಿಸಿದರು.
ರೈತರು ಸಾಲ ಮಾಡಿದರೆ ಉಳಿಗಾಲವಿಲ್ಲ ಎಂಬುದು ಸಾಬೀತಾಗಿದೆ. ಅಧಿಕಾರಿಗಳ ಆತಹತ್ಯೆ ಸೀರಿಯಲ್ನಂತೆ ಆಗುತ್ತಿದೆ. ಅಲ್ಲದೆ, ಗುತ್ತಿಗೆದಾರರು, ಬಾಣಂತಿಯರ ಸಾವು, ರೈತರ ಆತಹತ್ಯೆ ನಿರಂತರ ಎನ್ನುವಂತಾಗಿದೆ. ಈಗ ಹೊಸದಾಗಿ ಮೈಕ್ರೋ ಫೈನಾನ್‌್ಸ ಆತಹತ್ಯೆ ಪ್ರಕರಣಗಳು ಸೀರಿಯಲ್ ರೀತಿ ಸಂಭವಿಸುತ್ತಿವೆ ಎಂದು ಅವರು ಆರೋಪಿಸಿದರು.
ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಕುರುಡು ಕಾಂಚಾಣ ಕುಣಿಯುತ್ತಿದೆ. ಎಲ್ಲಾ ನಿಗಮಗಳಲ್ಲಿ ಸಾಲ ಕೊಡುವುದು ನಿಂತುಹೋಗಿದೆ. ವಿಧಿ ಇಲ್ಲದೆ ಮೈಕ್ರೋಫೈನಾನ್ಸ್ ನಿಂದ ಸಾಲ ಪಡೆಯುವುದಾಗಿ ಜನರು ಹೇಳುತ್ತಿದ್ದಾರೆ. ನಾಯಿ ಕೊಡೆಗಳ ರೀತಿಯಲ್ಲಿ ಮೈಕ್ರೋ ಫೈನಾನ್‌್ಸಗಳು ತಲೆ ಎತ್ತಿವೆ. ಮೊದಲು ಹಳ್ಳಿಗೆ ಹೋಗಿ 10 ಜನರ ಗುಂಪು ಮಾಡುತ್ತಾರೆ.
ಅವರಿಗೆ ತಲಾ 50 ಸಾವಿರ ರೂ. ಕೊಡುತ್ತಾರೆ. ಅವರಿಗೆ ಉಳಿದ 9 ಜನರು ಶ್ಯೂರಿಟಿ ನೀಡಬೇಕು. 50 ಸಾವಿರದಲ್ಲಿ 46 ಸಾವಿರ ರೂ. ಕೈಗೆ ಕೊಡುತ್ತಾರೆ. ಉಳಿದದ್ದು ಸರ್ವೀಸ್ ಚಾರ್ಜ್ ತೆಗೆದುಕೊಳ್ಳುತ್ತಾರೆ. 2 ವರ್ಷ ಈ ಹಣ ಕಟ್ಟಬೇಕು. 2700-2800 ರೂ.ನಂತೆ ಪ್ರತಿ ತಿಂಗಳು ಕಟ್ಟಬೇಕು. ಹಾಗೆ ಕಟ್ಟಿದ್ದರೆ 2 ವರ್ಷಕ್ಕೆ 67 ಸಾವಿರ ರೂ. ಆಗುತ್ತದೆ ಎಂದು ಅವರು ವಿವರಿಸಿದರು.
ಯಾರಾದರೂ ಒಬ್ಬರು ಕಟ್ಟಿಲ್ಲವೆಂದರೂ 10 ಜನರಲ್ಲಿ ಮಿಕ್ಕವರು ಕಟ್ಟದೆ ಇರೋರ ಶೇರ್ ಕಟ್ಟಬೇಕು. 2 ತಿಂಗಳು ನಿರಂತರವಾಗಿ ಕಟ್ಟಲಿಲ್ಲವೆಂದರೆ ಏಜೆಂಟ್, ಉಳಿದ 9 ಜನರನ್ನು ಕರೆದುಕೊಂಡು ಹೋಗಿ ಮನೆ ಮುಂದೆ ಗಲಾಟೆ ಮಾಡುತ್ತಾರೆ. 3 ತಿಂಗಳು ಆದ ಮೇಲೆ ರೌಡಿಗಳಿಗೆ ಕೊಡುತ್ತಾರೆ. ಆಮೇಲೆ ಜನರು ಊರು ಬಿಟ್ಟು ಹೋಗುತ್ತಾರೆ. ಈ ರೀತಿ 30-40 ಹಳ್ಳಿ ಕಾಲಿ ಆಗಿವೆ. ಆತಹತ್ಯೆಗಳು ಆಗಿವೆ ಎಂದರು.
ಟ್ರ್ಯಾಕ್ಟರ್ ತೆಗೆದುಕೊಂಡವರಿಗೆ ಹಣ ಕಟ್ಟಲು ಆಗಿಲ್ಲ. ಅವರಿಗೆ ತಮಿಳುನಾಡಿನಿಂದ ನೋಟೀಸ್ ಬಂದಿದೆ. ಬಾಣಂತಿ ಹಸುಗೂಸಿಗೆ ಹಾಲು ಉಣಿಸೋಕೂ ಬಿಡದೆ ಹೊರಗೆ ಹಾಕಿದ್ದಾರೆ. ಮುಖ್ಯಮಂತ್ರಿ ಸುಗ್ರೀವಾಜ್ಞೆ ತರುವುದಾಗಿ ಹೇಳಿದ್ದಾರೆ. ಲೂಟಿಯಾದ ಮೇಲೆ ಕೋಟೆ ಬಾಗಿಲು ಹಾಕುತ್ತಾರೆ ಎನ್ನುವಂತಾಗಿದೆ. ಇರೋ ಕಾನೂನಿನಲ್ಲೇ ಅವರನ್ನು ಬಂಧಿಸಬಹುದಿತ್ತು. ಅಕ್ರಮ, ಒತ್ತಡ, ಬಡವರ ಮೇಲೆ ಹಲ್ಲೆಯಾಗುತ್ತಿದೆ.
ನೋಟೀಸ್ ಕೊಡಬೇಕು, ಕೋರ್ಟ್ಗೆ ಹೋಗಬೇಕು, ಕೋರ್ಟ್ ಎವಿಕ್ಷನ್ ಬರಬೇಕು ಯಾವುದನ್ನೂ ಪಾಲನೆ ಮಾಡಿಲ್ಲ. ಇದಕ್ಕೆ ಪೋಲಿಸ್ನವರು ಸಹಕರಿಸ್ತಿದ್ದಾರಂತೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ಆರೋಪಿಸಿದರು.
ಯಾರೋ ಒಬ್ಬರು ಮಂತ್ರಿ ಕೇಂದ್ರ ಸರ್ಕಾರದ ವೈಫಲ್ಯ ಅಂತಾರೆ. ಈ ಬಾರಿಯ ಬಜೆಟ್ಗೆ ಹಣ ಇಲ್ಲ . ಸಾಲ ಮಾಡಲು 1.05 ಲಕ್ಷ ಕೋಟಿ ರೂ.ನಷ್ಟು ಅಂದಾಜಿಸಲಾಗಿದೆ. ಇವರ ಬಜೆಟ್ಗೆ ಕೇಂದ್ರ ಸರ್ಕಾರ ಹಣ ಕೊಡಬೇಕಂತೆ ಎಂದು ಅವರು ಟೀಕಿಸಿದರು.
ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎಷ್ಟು ಹಣ ಕೊಟ್ಟಿದ್ದರು, ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದಲ್ಲಿ ಎಷ್ಟು ಕೊಟ್ಟಿದ್ದಾರೆ ಲೆಕ್ಕ ಕೊಡಿ? ನಾನು ಸವಾಲು ಹಾಕುತ್ತೇನೆ. ಕೇಂದ್ರ ಸರ್ಕಾರ ಮಾನದಂಡದ ಆಧಾರದಲ್ಲಿ ರಾಜ್ಯಗಳಿಗೆ ಹಣ ಕೊಡಲಾಗುತ್ತಿದೆ. ಯಾವ ಇಲಖೆಗೂ ಸರಿಯಾಗಿ ಹಣ ಕೊಟ್ಟಿಲ್ಲ ಕಡಿಮೆ ಮಾಡಿದ್ದಾರೆ.
ವಿವಿಧ ಇಲಾಖೆಗಳ ಮೂಲಕ ಒಟ್ಟು 1,04, 405 ಕೋಟಿ ರೂ. ಬಿಜೆಪಿ ಸರ್ಕಾರ ಕೊಟ್ಟಿದ್ದು, 90,401 ಕೋಟಿ ರೂ. ಕಾಂಗ್ರೆಸ್ ಸರ್ಕಾರ ಕೊಟ್ಟಿದೆ. 14 ಸಾವಿರ ಕೋಟಿ ರೂ. ಕೊರತೆ ಇದೆ ಎಂದರು.ನಿನ್ನೆ ರಾಜ್ಯಪಾಲರು ಗಣ ರಾಜ್ಯೋತ್ಸವದ ತಮ ಭಾಷಣದಲ್ಲಿ ಸರ್ಕಾರದವರು ಏನು ಬರೆದು ಕೊಟ್ಟಿದ್ದಾರೊ, ಅದನ್ನು ಓದಿದ್ದಾರೆ ಅಷ್ಟೇ. ಸರ್ಕಾರವನ್ನು ಹೊಗಳಿದರೆ ಏಕೆ ವಿಧೇಯಕಗಳನ್ನು ವಾಪಸ್ಸು ಕಳುಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.