ಬೆಂಗಳೂರು,ಜು.18- ಸದ್ಯಕ್ಕೆ ಆಸ್ತಿ ನಗದೀಕರಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಚಿವ ಬೋಸರಾಜು ಸ್ಪಷ್ಟಪಡಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ವಿಧಾನಪರಿಷತ್‌ನಲ್ಲಿ ಉತ್ತರಿಸಿದ ಬೋಸರಾಜು, ಆಸ್ತಿಗಳ ನಗದೀಕರಣ ಕುರಿತಾಗಿ ಹಲವಾರು ಊಹಾಪೋಹಗಳು ಎದ್ದಿವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ರೀತಿಯ ಚರ್ಚೆಯಾಗಿಲ್ಲ ಎಂದು ಪುನರುಚ್ಚರಿಸಿದರು.
ನಾನು ಸ್ವತಃ ಮುಖ್ಯಮಂತ್ರಿಗಳ ಉತ್ತರದ ದಾಖಲೆಗಳನ್ನು ಸದನದಲ್ಲಿ ನೀಡುತ್ತಿದ್ದೇನೆ. ನಮ ಸರ್ಕಾರದ ಮುಂದೆ ಸಾಮಾನ್ಯ ಪ್ರಸ್ತಾವನೆ ಇಲ್ಲವೇ ಇಲ್ಲ. ಆರ್ಥಿಕ ಇಲಾಖೆ ಕೇವಲ ಮಾಹಿತಿ ಸಂಗ್ರಹಕ್ಕೆ ಮಾತ್ರ ಮುಂದಾಗಿತ್ತು. ಹೀಗಾಗಿಯೇ ಗೊಂದಲ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿದರು.
ಆಸ್ತಿಗಳ ನಗದೀಕರಣ ಕೇವಲ ಇಲಾಖೆಗಳ ಆಂತರಿಕ ವಿಷಯ. ಅವರ ಮಟ್ಟದಲ್ಲಿ ಚರ್ಚೆಯಾಗಿದೆಯೇ ಹೊರತು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ. ಒಂದು ವೇಳೆ ಆಸ್ತಿಗಳ ನಗದೀಕರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಬೇಕು. ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಇವೆಲ್ಲವೂ ಚರ್ಚೆಯಾದ ನಂತರವೇ ತೀರ್ಮಾನವಾಗುತ್ತದೆ ಎಂದು ಹೇಳಿದರು.
ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ತಿಪ್ಪೇಸ್ವಾಮಿಯವರು, ಗ್ಯಾರಂಟಿಗಳ ಹಿನ್ನೆಲೆ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ರಾಜ್ಯಸರ್ಕಾರ ನಿಗಮ, ಪ್ರಾಧಿಕಾರ, ಮಂಡಳಿಗಳ ಆಸ್ತಿಗಳನ್ನು ನಗದೀಕರಣ ಮಾಡಲು ಹೊರಟಿದೆ ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಇದು ಹಣಕಾಸು ಇಲಾಖೆಯ ಆಂತರಿಕ ವಿಚಾರ. ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸುವುದು ಸೂಕ್ತವಲ್ಲ ಎಂದು ಸಲಹೆ ಮಾಡಿದರು.ಆಗ ತಿಪ್ಪೇಸ್ವಾಮಿ, ಸರ್ಕಾರ ಹೊರಗಿನವರನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲು ಹೊರಟಿದೆ. ನಮಲ್ಲೇ ಸಾಕಷ್ಟು ಆರ್ಥಿಕ ತಜ್ಞರಿದ್ದಾರೆ. ಬೋಸ್ಟಾನ್ ಕಂಪನಿಗೆ ಸಲಹೆ ನೀಡುವಂತೆ ಕೇಳಿಕೊಳ್ಳುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.