ಬೆಂಗಳೂರು, ಜ.3- ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಮುಖ್ಯಮಂತ್ರಿಮತ್ತು ಸಚಿವರು ಊಟಕ್ಕೆ ಸೇರಿದ್ದು ಪೂರ್ವ ನಿಯೋಜಿತವಲ್ಲ. ಔಪಚಾರಿಕ ಭೇಟಿಯಷ್ಟೇ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಸ್ಪಷ್ಟ ಪಡಿಸಿದ್ದಾರೆ.
ನಿನ್ನೆ ಸಚಿವ ಸತೀಶ್ ಜಾರಕಿಹೊಳಿ ಎಲ್ಲರೂ ಊಟಕ್ಕೆ ಸೇರೋಣ ಎಂದು ಆಹ್ವಾನಿಸಿದರು. ವಿಷಯ ಏನು ಎಂದು ಮುಖ್ಯಮಂತ್ರಿ ಕೇಳಿದರು. ಏನೂ ಇಲ್ಲ ಊಟಕ್ಕೆ ಸೇರೋಣ ಎಂದು ಆಹ್ವಾನಿಸಿದರು. ಅದಕ್ಕಾಗಿ ಎಲ್ಲರೂ ಸೇರಿಕೊಂಡೆವು. ಕಾರಣ ಇಷ್ಟೇ ಬೇರೇನೂ ಇಲ್ಲ ಎಂದು ಹೇಳಿದರು.
ಗೃಹ ಸಚಿವ ಪರಮೇಶ್ವರ್ ಮಲೇಷ್ಯಾಗೆ ಹೋಗುವುದಾಗಿ ಹೇಳಿದರು. ಅವರು ಊಟ ಮಾಡಿ ಹೊರಟರು. ಈ ಸಭೆ ಪೂರ್ವನಿಯೋಜಿತವಲ್ಲ, ಗುಪ್ತ ಕಾರ್ಯಸೂಚಿಯನ್ನು ಹೊಂದಿದ್ದ ರಹಸ್ಯ ಚರ್ಚೆಯೂ ಅಲ್ಲ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಾಮಾನ್ಯವಾಗಿ ಚರ್ಚೆ ಮಾಡಿದ್ದೇವೆ ಎಂದು ಸ್ಪಷ್ಟ ಪಡಿಸಿದರು.
ವಿರೋಧ ಪಕ್ಷಗಳ ನಾಯಕರು ಎಲ್ಲದಕ್ಕೂ ರಾಜೀನಾಮೆ ಕೊಡಿ ಎನ್ನುತ್ತಾರೆ. ಜನರ ಮನಸ್ಸಿನಲ್ಲಿ ಬೇರೆ ಭಾವನೆ ಮೂಡಿಸಲಾಗುತ್ತಿದೆ. ಆದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ಚರ್ಚೆ ನಡೆಸಿದ್ದೇವೆ. ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಮ ಕೈನಲ್ಲಿ ಇಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಮಹದೇವಪ್ಪ ಪ್ರತಿಕ್ರಿಯಿಸಿದರು.ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಚರ್ಚೆ ವಿಚಾರ ಚರ್ಚೆಯಾಗಿಲ್ಲ. ಆದರೆ 150 ಕೋಟಿ ರುಪಾಯಿ ಖರ್ಚು ಮಾಡಿ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ನಡೆಸಲಾಗಿದೆ.
ಅದನ್ನ ಜಾರಿಗೆ ತರದೆ ಬಿಡಲು ಸಾಧ್ಯವೇ ? ಎಂದು ಅವರು ಮರು ಪ್ರಶ್ನಿಸಿದರು.
ಅಹಿಂದ ಸಮುದಾಯಗಳೇ ನಮ ಪಕ್ಷಕ್ಕೆ ಬೆನ್ನೆಲುಬು. ಅವರಿಗೆ ಅನ್ಯಾಯ ಮಾಡಲು ಸಾಧ್ಯವಿಲ್ಲ. ಸಮೀಕ್ಷೆಯ ವರದಿಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.
ಬೀದರ್ನ ಸಚಿನ್ ಆತಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರವಿಲ್ಲ. ಅವರ ವಿರುದ್ಧ ಯಾವುದೇ ಸಾಕ್ಷಿ ಪುರಾವೆಗಳು ಇಲ್ಲ. ಆದರೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.
ಎಂಟಹತ್ತು ವರ್ಷಗಳಿಂದ ರಾಜ್ಯದಲ್ಲಿ ಬಸ್ ಪ್ರಯಾಣ ದರ ಪರಿಷ್ಕರಣೆಯಾಗಿರಲಿಲ್ಲ. ಅದಕ್ಕಾಗಿ ಈಗ ಮಾಡಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ ರಾಜ್ಯದಲ್ಲಿ ಪ್ರಯಾಣ ದರ ಕಡಿಮೆ ಇದೆ. ಹಾಲಿನ ದರ ಹೆಚ್ಚಳದಿಂದ ರೈತರಿಗೆ ಒಳ್ಳೆಯದಾಗಲಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ.
ಸಿಎಂ ಬದಲಾವಣೆ ಎಲ್ಲಾ ಎಐಸಿಸಿಗೆ ಬಿಟ್ಟ ವಿಚಾರ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಇನ್ನೂ ಮೂರೂವರೆ ವರ್ಷ ಅವರೇ ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಐದು ವರ್ಷದ ಬಳಿಕ ಮತ್ತೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಬಹುದು. ಈ ವಿಚಾರದಲ್ಲಿ ಪದೇ ಪದೇ ಏಕೆ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಕೇಳಿದರು. ಜನವರಿ 13ರಂದು ಚಾಮರಾಜನಗರದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಮಹದೇವಪ್ಪ ತಿಳಿಸಿದರು.