ಬೆಂಗಳೂರು,ಮಾ.27– ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯನ್ನು ಜಾರಿಗೊಳಿಸಲು ನಮ ಸರ್ಕಾರ ಬದ್ಧವಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಪುಟದ ಹಲವು ಸಚಿವರು ಪುನರುಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ನಿಂದ ನಡೆದ ಚಿತ್ರದುರ್ಗದಲ್ಲಿನ ಸಮಾವೇಶದಲ್ಲಿ ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಘೋಷಣೆಯಾಗಿದೆ. ನಾವು ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಸುಪ್ರೀಂಕೋರ್ಟ್ ಕೂಡ ಇತ್ತೀಚೆಗೆ ನೀಡಿರುವ ಆದೇಶದಲ್ಲಿ ರಾಜ್ಯಸರ್ಕಾರ ಒಳಮೀಸಲಾತಿಯನ್ನು ಜಾರಿಗೊಳಿಸಬಹುದು. ಆದರೆ ಅದಕ್ಕೂ ಮುನ್ನ ಪ್ರಾಯೋಗಿಕ ಡಾಟಾ ಅಗತ್ಯವೆಂದು ತಿಳಿಸಿದೆ.
ಒಂದು ವೇಳೆ ಸೂಕ್ತ ದತ್ತಾಂಶ ಇಲ್ಲದೇ ಇದ್ದರೆ ಒಳಮೀಸಲಾತಿಯ ವಿಚಾರಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಪ್ರಾಯೋಗಿಕ ಡಾಟಾ ಸಂಗ್ರಹಣೆಗೆ ಯಾವ ಮಾದರಿ ಅನುಸರಿಸಬೇಕು ಎಂಬುದು ಚರ್ಚೆಯಾಗುತ್ತಿದೆ. ಸಮಗ್ರವಾದ ಸಮೀಕ್ಷಾ ಅಭಿಯಾನ ಮಾಡಬೇಕೆ? ಅಥವಾ ಕೇಂದ್ರ ಸರ್ಕಾರದ ಜನಗಣತಿಯ ವರದಿಯನ್ನು ಅವಲಂಬಿಸಬೇಕೆ? ಎಂಬ ಗೊಂದಲಗಳಿವೆ.
ಕೇಂದ್ರ ಸರ್ಕಾರದ ಜನಗಣತಿ ವರದಿಯಲ್ಲಿ ಉಪಜಾತಿಗಳ ನೋಂದಣಿಗೆ ಅವಕಾಶ ಸಿಗಲಿದೆಯೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಂತದಲ್ಲಿ ನಾಗಮೋಹನದಾಸ್‌ರವರ ವರದಿ ಸಲ್ಲಿಕೆಯಾಗಿದೆ ಎಂದರು.
ರಾಜ್ಯಸರ್ಕಾರವೇ ತನ್ನದೇ ಆದ ಸಮೀಕ್ಷೆಯನ್ನು ನಡೆಸಿ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಬಹುದು. ಆ ರೀತಿಯಾಗಬಾರದು. ಸರ್ಕಾರದ ನಿರ್ಧಾರ ದೃಢವಾಗಿರಬೇಕು ಎಂಬ ನಿಲುವು ನಮದಾಗಿದೆ. ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದೇವೆ. ಎಲ್ಲಾ ಸಂಘಟನೆಗಳ ಜೊತೆಯೂ ಚರ್ಚೆ ನಡೆಸಿ ವಿಶ್ವಾಸಕ್ಕೆ ಪಡೆಯಲಾಗಿದೆ ಎಂದು ಪ್ರಿಯಂಕ್ ಖರ್ಗೆ ತಿಳಿಸಿದರು.
ಅಬಕಾರಿ ಸಚಿವ ಆರ್.ಬಿ.ತಿಮಾಪುರ್ ಮಾತನಾಡಿ, ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧತೆ ಹೊಂದಿದೆ. ಇದನ್ನು ಜಾರಿಗೊಳಿಸುವುದು ಖಚಿತ. ವೈಜ್ಞಾನಿಕವಾಗಿ ಬೇಕಾಗಿರುವ ದತ್ತಾಂಶ ಹಾಗೂ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸುವ ಅಗತ್ಯವಿದೆ. ನ್ಯಾ.ನಾಗಮೋಹನದಾಸ್‌ರವರ ಆಯೋಗ ಯಾವ ರೀತಿಯ ಶಿಫಾರಸ್ಸು ಮಾಡಲಿದೆ ಎಂಬುದನ್ನು ಚರ್ಚಿಸಲಾಗುವುದು ಎಂದರು.
ರಾಜ್ಯಸರ್ಕಾರದ ನಿರ್ಧಾರಕ್ಕೆ ನಮ ಸಂಪೂರ್ಣ ಸಹಮತ ಇದೆ. ನ್ಯಾ.ನಾಗಮೋಹನದಾಸ್ ಅವರು ಮಧ್ಯಂತರ ವರದಿಯನ್ನು ಯಾವ ಕಾರಣಕ್ಕೆ ನೀಡುತ್ತಿದ್ದಾರೆ ಎಂಬುದನ್ನು ಅಧ್ಯಯನ ನಡೆಸಲಾಗುವುದು. ಅದರ ಆಧಾರದ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನೂ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
50 ವರ್ಷಗಳಿಂದ ಕೆಲ ಜಾತಿಗಳು ಮೀಸಲಾತಿ ವಿಷಯದಲ್ಲಿ ಸಮಸ್ಯೆ ಅನುಭವಿಸಿವೆ. ಇಷ್ಟೂ ವರ್ಷ ನಿರೀಕ್ಷೆಯಿಂದಿದ್ದವರಿಗೆ ಈಗ ಮೂರ್ನಾಲ್ಕು ತಿಂಗಳ ಕಾಯುವಿಕೆ ದೊಡ್ಡದಲ್ಲ. ಸರ್ಕಾರದ ನಿರ್ಧಾರ ಖಚಿತವಾಗಿ ಜಾರಿಯಾಗುವ ನಿಟ್ಟಿನಲ್ಲಿ ಚರ್ಚೆಗಳಾಗುತ್ತಿವೆ ಎಂದರು.