ಬೆಂಗಳೂರು,ಮೇ 20– ಮಳೆ ಅನಾಹುತಗಳನ್ನು ತಗ್ಗಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಜನರ ಆಸ್ತಿ ಮತ್ತು ಜೀವರಕ್ಷಣೆಗೆ ಬದ್ಧತೆಯಿಂದ ಕೆಲಸ ಮಾಡುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಮಳೆಯ ಅನಾಹುತದಿಂದ ಇಬ್ಬರು ಮೃತಪಟ್ಟಿರುವ ವಿಚಾರ ನಿನ್ನೆ ಸಂಜೆ ತಿಳಿದುಬಂದಿದ್ದು, ಹೊಸಪೇಟೆಯಿಂದ ವಾಪಸ್ ಬಂದ ಬಳಿಕ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದರು.ನಾವು ಎಲ್ಲೇ ಇರಲಿ, ಹೇಗೇ ಇರಲಿ ಬೆಂಗಳೂರಿನ ಗೌರವ ರಕ್ಷಣೆಗೆ ಪೂರಕವಾಗಿ ಕೆಲಸ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಕೆಲವು ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ನಿನ್ನೆ ಸಂಜೆ ನಾನು ಕೆಲ ಸ್ಥಳಗಳಿಗೆ ಹೋಗಿದ್ದೇನೆ. ಮಳೆ ಅನಾಹುತದಿಂದ ಇಬ್ಬರು ಮೃತಪಟ್ಟಿರುವುದು ನಿನ್ನೆಯೇ ತಿಳಿದಿದೆ. ಇಂದು ಸಂಜೆ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ಟೀಕೆ ಮಾಡುತ್ತಿರಲಿ, ಬೆಂಗಳೂರು ಮುಳುಗುತ್ತಿದೆ ಎಂದರೆ ಪ್ರಕೃತಿ ವಿಕೋಪವನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಯಾರು, ಎಷ್ಟೇ ಟೀಕೆ ಮಾಡಲಿ ಹೆಚ್ಚು ಮಳೆ ಬಂದಷ್ಟು ರಾಜ್ಯಕ್ಕೆ ಒಳ್ಳೆಯದು. ಶಾಶ್ವತ ಪರಿಹಾರಕ್ಕಾಗಿ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ ಎಂದರು.
ಹೊಸಪೇಟೆಯಲ್ಲಿನ ರಾಜ್ಯಸರ್ಕಾರದ ಸಮರ್ಪಣೆ ಸಂಕಲ್ಪ ಸಮಾವೇಶಕ್ಕಾಗಿ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಮಾನನಿಲ್ದಾಣದವರೆಗೂ ಒಂದೇ ಕಾರಿನಲ್ಲಿ ಪ್ರಯಾಣಿಸಿದರು.