ಬೆಂಗಳೂರು,ಡಿ.26- ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಹುದ್ದೆಗೆ ನಾಳೆ ಮತದಾನ ನಡೆಯಲಿದ್ದು, ಎರಡು ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹಾಗೂ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಮಂಜೇಗೌಡರ ಸಹೋದರ ಬಿ.ಪಿ.ಕೃಷ್ಣೇಗೌಡ ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ರಾಜ್ಯದಲ್ಲಿ 5.25 ಲಕ್ಷ ಸರ್ಕಾರಿ ನೌಕರರ ಸದಸ್ಯತ್ವ ಹೊಂದಿರುವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಹುದ್ದೆಗೆ ನಾಳೆ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಸಂಘದಲ್ಲಿ ಮತದಾನ ನಡೆಯಲಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.
ಅಧ್ಯಕ್ಷ ಸ್ಥಾನದ ಮರು ಆಯ್ಕೆಗಾಗಿ ಷಡಾಕ್ಷರಿ ಹಾಗೂ ಖಜಾಂಚಿ ಸ್ಥಾನಕ್ಕೆ ನಾಗರಾಜ.ಆರ್ ಜುಮನ್ನವರ ಸ್ಪರ್ಧಿಸಿದ್ದಾರೆ. ಇವರ ಎದುರಾಳಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಬಿ.ಪಿ.ಕೃಷ್ಣೇಗೌಡ, ಖಜಾಂಚಿ ಸ್ಥಾನಕ್ಕೆ ಶಿವರುದ್ರಯ್ಯ.ವಿ.ವಿ ಅವರು ಸ್ಪರ್ಧೆಯಲ್ಲಿದ್ದಾರೆ.
ಈಗಾಗಲೇ ಎರಡು ಬಣಗಳ ನಡುವೆ ಆರೋಪ-ಪ್ರತ್ಯಾರೋಪ ನಿರಂತರವಾಗಿ ನಡೆಯುತ್ತಾ ಬಂದಿದೆ. ಎರಡೂ ಬಣಗಳು ತಮದೇ ಆದ ಭರವಸೆಗಳನ್ನು ನೀಡುತ್ತಾ ಮತ ಯಾಚನೆಯಲ್ಲಿ ತೊಡಗಿವೆ.
ರಾಜ್ಯ ಪರಿಷತ್ ಸ್ಥಾನಗಳ ಚುನಾವಣೆಗೆ ಈಗಾಗಲೇ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಬೆಂಗಳೂರಿನಿಂದ ರಾಜ್ಯ ಪರಿಷತ್ನ 102 ಸದಸ್ಯರು, 193 ತಾಲ್ಲೂಕುಗಳಲ್ಲಿ ತಲಾ ನಾಲ್ಕು ಮಂದಿಯಂತೆ ಹಾಗೂ ಪ್ರತಿ ಜಿಲ್ಲೆಯಲ್ಲಿ ತಲಾ 4 ಮಂದಿ ಪರಿಷತ್ ಸದಸ್ಯರು ನಾಳೆ ನಡೆಯುವ ಸಂಘದ ಅಧ್ಯಕ್ಷ, ಖಜಾಂಚಿ ಸ್ಥಾನದ ಚುನಾವಣೆಗಳಲ್ಲಿ ಮತದಾನ ಮಾಡಲಿದ್ದಾರೆ.
ಒಟ್ಟು 964 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.