Thursday, November 6, 2025
Homeರಾಜ್ಯRSS ಚಟುವಟಿಕೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ಸರ್ಕಾರಕ್ಕೆ ಮತ್ತೆ ಮುಖಭಂಗ

RSS ಚಟುವಟಿಕೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ಸರ್ಕಾರಕ್ಕೆ ಮತ್ತೆ ಮುಖಭಂಗ

Government facing another setback in controlling RSS activities

ಬೆಂಗಳೂರು,ನ.6- ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌‍ಎಸ್‌‍)ವನ್ನು ಗುರಿಯಾಗಿಟ್ಟು ಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯ ಎಂಬ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ದ್ವಿಸದಸ್ಯ ಪೀಠ ಎತ್ತಿ ಹಿಡಿದಿದ್ದು, ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ.
ತಡೆಯಾಜ್ಞೆ ತೆರವು ಮಾಡಬೇಕಾದರೆ ಧಾರವಾಡ ಪೀಠದ ಮುಂದೆ ಹೋಗುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಧಾರವಾಡ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲನವಿಯನ್ನು ದ್ವಿಸದಸ್ಯಪೀಠ ವಜಾಗೊಳಿಸಿದೆ. ಇದರಿಂದ ಸರ್ಕಾರಕ್ಕೆ 2ನೇ ಬಾರಿ ಕಾನೂನು ಹೋರಾಟದಲ್ಲಿ ಭಾರೀ ಹಿನ್ನಡೆಯಾಗಿದೆ.

ವಾದ-ಪ್ರತಿವಾದವನ್ನು ಆಲಿಸಿ ಕಾಯ್ದಿರಿಸಿದ ತೀರ್ಪನ್ನು ಪ್ರಕಟಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌‍ ಜಿ ಪಂಡಿತ್‌ ಮತ್ತು ಕೆ ಬಿ ಗೀತಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದು ಸರ್ಕಾರದ ಮೇಲನವಿ ಅರ್ಜಿಯನ್ನು ವಜಾಗೊಳಿಸಿತು. ರಸ್ತೆ, ಉದ್ಯಾನ, ಆಟದ ಮೈದಾನ ಸೇರಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಅಧಿಕ ಮಂದಿ ಗುಂಪು ಸೇರಿದರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸಬೇಕೇ ಎಂದು ಪ್ರಶ್ನೆ ಮಾಡಿದೆ.

ಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2025ರ ಅಕ್ಟೋಬರ್‌ 18ರಂದು ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಸರ್ಕಾರವು ತನ್ನ ಆಸ್ತಿ ಮತ್ತು ಸಾರ್ವಜನಿಕರ ಹಕ್ಕು ರಕ್ಷಣೆ ಮಾಡಲು 10ಕ್ಕೂ ಅಧಿಕ ಮಂದಿ ರಸ್ತೆ, ಮೈದಾನದಲ್ಲಿ ಸಮಾವೇಶ/ರ್ಯಾಲಿ ನಡೆಸುವುದನ್ನು ಕಾನೂನುಬಾಹಿರ ಎಂದಿದ್ದು, ಭಾರತೀಯ ನ್ಯಾಯ ಸಂಹಿತೆ ಅಡಿ ಅಪರಾಧ ಕೃತ್ಯ ಎಂದು ಆದೇಶ ಮಾಡಿದೆ. ಇದು ಸಕಾರಾತಕ ಆದೇಶ ಎಂದು ಸರ್ಕಾರದ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದರು.

ಉದ್ಯಾನ, ಆಟದ ಮೈದಾನಕ್ಕೆ ಸ್ಪಷ್ಟ ವ್ಯಾಖ್ಯಾನವಿದೆ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ರಸ್ತೆಯಲ್ಲಿ ಮೆರವಣಿಗೆ/ರ್ಯಾಲಿ/ಸಮಾವೇಶ ಮಾಡುವುದಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರಿಂದ ಸಾರ್ವಜನಿಕರಿಗೆ ಸರಾಗವಾಗಿ ಓಡಾಡಲು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ತಪ್ಪೇನಿದೆ? ಎಂದು ಸಮರ್ಥಿಸಿಕೊಂಡಿದ್ದರು.

ಯಾವುದೇ ಚಟುವಟಿಕೆ ನಡೆಸಲು ಅನುಮತಿ ಕೋರಿದರೆ ಮೂರು ದಿನದಲ್ಲಿ ನೀಡಲಾಗುವುದು. ಈ ಸಂಬಂಧ ಸರ್ಕಾರವು ಮಾರ್ಗಸೂಚಿ ರೂಪಿಸಿದೆ. ಸರ್ಕಾರದ ಆಸ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಆಕ್ಷೇಪಿಸಲಾದ ಆದೇಶ ಮಾಡಲಾಗಿದೆ ಎಂದು ಹೇಳಿದ್ದರು.
ಅರ್ಜಿದಾರ ಪರವಾಗಿ ಹಿರಿಯ ವಕೀಲ ಅಶೋಕ್‌ ಹಾರ್ನಹಳ್ಳಿ, ಆಟದ ಮೈದಾನ, ಸಾರ್ವಜನಿಕ ಸ್ಥಳಗಳು ತನಗೆ ಸೇರಿದ್ದು, ಅವುಗಳನ್ನು ಜನರು ಬಳಕೆ ಮಾಡಲು ಹಕ್ಕು ಹೊಂದಿಲ್ಲ ಎಂದು ಸರ್ಕಾರ ಭಾವಿಸಿದೆ. ಇದು ಸರಿಯಾದ ರೀತಿಯ ಕಾನೂನಿನ ವ್ಯಾಖ್ಯಾನವಲ್ಲ. ಏಕಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶ ತೆರವು ಕೋರುವುದಿಲ್ಲ, ಅದಕ್ಕಾಗಿ ಮೇಲನವಿ ಸಲ್ಲಿಕೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ನಮ ಆಕ್ಷೇಪವಿದೆ ಎಂದು ಹೇಳಿದ್ದರು.

ಗುಂಪೊಂದು ಮೈದಾನದಲ್ಲಿ ಕ್ರಿಕೆಟ್‌ ಆಡಬೇಕೆಂದರೆ ಸರ್ಕಾರದ ಬಳಿ ದಿನಂಪ್ರತಿ ಅನುಮತಿ ಪಡೆಯಬೇಕೆ? ಇದರಲ್ಲಿ ಸಕಾರಾತಕವಾದ ವಿಚಾರವೇನಿದೆ? ಸಂವಿಧಾನದ 19(ಬಿ) ವಿಧಿಯಡಿ ಶಾಂತಿಯುತವಾಗಿ ಜೊತೆಗೂಡುವುದನ್ನು ನಿರ್ಬಂಧಿಸಲಾಗದು. ಹೀಗಾಗಿ, ಇದಕ್ಕಿಂತ ಸ್ವೇಚ್ಛೆಯ ಆದೇಶ ಇನ್ನೊಂದಿಲ್ಲ ಎಂದು ಆಕ್ಷೇಪಿಸಿದ್ದರು.

ಪ್ರತಿಯೊಂದು ಮೈದಾನ, ರಸ್ತೆ ನಮಗೆ ಸೇರಿರುವುದರಿಂದ ಅದನ್ನು ನಿರ್ಬಂಧಿಸುವ ಅಧಿಕಾರ ನಮಗೆ ಇದೆ ಎಂದು ಸರ್ಕಾರ ಹೇಳಲಾಗದು. ಉದ್ಯಾನಕ್ಕೆ ಹೋಗುವವರಿಗೆ ಅನುಮತಿ ಪಡೆಯಬೇಕು ಎಂದು ಸರ್ಕಾರ ಹೇಳಲಾಗದು. ಪೂರ್ವಾನುಮತಿ ಇಲ್ಲದೆ ಆಟದ ಮೈದಾನದಲ್ಲಿ ಕ್ರಿಕೆಟ್‌ ಆಡುವಂತಹ ದಿನನಿತ್ಯದ ಚಟುವಟಿಕೆಗಳನ್ನು ಇದು ಪರಿಣಾಮಕಾರಿಯಾಗಿ ಅಪರಾಧೀಕರಿಸುತ್ತದೆ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸುವ ವಿಚಾರ ನಗರ ಸ್ಥಳೀಯ ಸಂಸ್ಥೆಗಳಿಗೆ ಬರುತ್ತದೆ ಎಂದು ವಾದಿಸಿದರು.

ಅಕ್ಟೋಬರ್‌ 28ರಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಸಾರ್ವಜನಿಕ ಸ್ಥಳಗಳಲ್ಲಿ ಹತ್ತಕ್ಕೂ ಅಧಿಕ ಮಂದಿ ಗುಂಪು ಸೇರುವುದನ್ನು ನಿರ್ಬಂಧಿಸಿ ಸರ್ಕಾರ ಹೊರಡಿಸಿರುವ ಆದೇಶವು ಮೇಲ್ನೋಟಕ್ಕೆ ಸಂವಿಧಾನದ 19(1)(ಎ) (ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಹಾಗೂ 19(1)(ಬಿ) (ಶಸಾ್ತ್ರಸ್ತ್ರರಹಿತವಾಗಿ, ಶಾಂತಿಯುತವಾಗಿ ಒಟ್ಟುಗೂಡುವ) ವಿಧಿ ಅಡಿಯಲ್ಲಿ ಸಾರ್ವಜನಿಕರಿಗೆ ದೊರೆತಿರುವ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ. ಸಂವಿಧಾನ ಪ್ರದತ್ತ ಹಕ್ಕನ್ನು ಕಾನೂನು ಜಾರಿಗೊಳಿಸುವ ಮೂಲಕ ಕಸಿದುಕೊಳ್ಳಬಹುದೇ ಹೊರತು ಸರ್ಕಾರಿ ಆದೇಶ ಹೊರಡಿಸುವ ಮೂಲಕವಲ್ಲ ಎಂದು ಮಧ್ಯಂತರ ಆದೇಶ ಮಾಡಿತ್ತು.

ಸರ್ಕಾರದ ಆದೇಶ ಪ್ರಾಥಮಿಕ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅ.28ರಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ ಏಕಸದಸ್ಯ ನ್ಯಾಯಾಧೀಶರು ಹೇಳಿದ್ದರು. ಸರ್ಕಾರದ ಆದೇಶ ಉಲ್ಲಂಘಿಸಿ ನಡೆಯುವ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆಯನ್ನು ಭಾರತೀಯ ನ್ಯಾಯ ಸಂಹಿತಾ ನಿಬಂಧನೆಗಳಡಿ ಕಾನೂನುಬಾಹಿರ ಸಭೆ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಆದೇಶದಲ್ಲಿ ಹೇಳಿತ್ತು.

RELATED ARTICLES

Latest News