ಬೆಂಗಳೂರು,ಆ.11- ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರು ಸೈಬರ್ ವಂಚನೆಗೊಳಗಾಗಿ 45 ಸಾವಿರ ಹಣ ಕಳೆದುಕೊಂಡಿದ್ದಾರೆ.ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿ ಹೇಮಲತಾ ಎಂಬುವವರೇ ಹಣ ಕಳೆದುಕೊಂಡಿರುವ ಅಧಿಕಾರಿ.
ಆ.6 ರಂದು ಅಧೀನ ಕಾರ್ಯದರ್ಶಿಗಳ ವಾಟ್ಸ್ ಪ್‌ನಿಂದ 45 ಸಾವಿರ ರೂ. ಅವಶ್ಯಕತೆ ಇದೆ ಎಂಬ ಸಂದೇಶ ಬಂದಿದೆ.ಈ ಸಂದೇಶ ನೋಡಿದ ಹೇಮಲತಾ ಅವರು ಹಣದ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸದೇ ತಮ ಮೇಲಾಧಿಕಾರಿಯೆಂದು ಭಾವಿಸಿ ಸಂದೇಶದಲ್ಲಿದ್ದ ನಂಬರ್‌ಗೆ ಗೂಗಲ್‌ಪೇ ಮೂಲಕ ಹಣ ವರ್ಗಾಹಿಸಿದ್ದಾರೆ.
ನಂತರ ಆ ನಂಬರ್‌ಗೆ ಹೇಮಲತಾ ಅವರು ಕರೆ ಮಾಡಿದಾಗ ಮೊಬೈಲ್ ನಂಬರ್ ಹ್ಯಾಕ್ ಆಗಿರುವುದು ತಿಳಿದುಬಂದಿದೆ.ಈ ಬಗ್ಗೆ ಅನುಮಾನ ವ್ಯಕ್ತ ಪಡಿಸಿ ಸೋನುಕುಮಾರ್ ಎಂಬುವವರ ವಿರುದ್ಧ ಹೇಮಲತಾ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯಾವ ಮೊಬೈಲ್ ನಂಬರ್‌ನಿಂದ ಸಂದೇಶ ಬಂದಿದೆ, ಯಾವ ಸ್ಥಳದಿಂದ ಬಂದಿದೆ . ಯಾವ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.