ಬೆಂಗಳೂರು,ಸೆ.24-ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಬಿಜೆಪಿ ವಿನೂತನವಾಗಿ ಪ್ರತಿಭಟನೆ ನಡೆಸಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿಮುಟ್ಟಿಸಿದೆ. ಬೆಂಗಳೂರು-ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ದಾವಣಗೆರೆ, ಬೆಂಗಳೂರು ದಕ್ಷಿಣ, ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ರಾಯಚೂರು ಸೇರಿದಂತೆ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳು ಸೇರಿದಂತೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಗುಂಡಿ ಮುಚ್ಚಿ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿತು.
ಪ್ರತಿಭಟನಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬೆಂಗಳೂರನ್ನು ಪ್ರತಿನಿಧಿಸುವ ಸಚಿವರ ಭಾವಚಿತ್ರಗಳನ್ನು ಹಿಡಿದು, ಮುಚ್ಚಿ ಮುಚ್ಚಿ ಗುಂಡಿ ಮುಚ್ಚಿ. ಉಳಿಸಿ ಉಳಿಸಿ ಜನರ ಪ್ರಾಣ ಉಳಿಸಿ ಎಂದು ವಿನೂತನವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನಸೆಳೆದರು.
ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬೆಂಗಳೂರಿನಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಹಿಡಿಶಾಪ ಹಾಕಿದರು.
ಬೆಂಗಳೂರಿನ ಯಲಹಂಕದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಬೆಳಗ್ಗೆಯೇ ಭಾಗಿಯಾಗಿದ್ದ ಕಾರ್ಯಕರ್ತರು ರಸ್ತೆಗುಂಡಿಗಳನ್ನು ಮುಚ್ಚಿ ಸರ್ಕಾರ ಗುಂಡಿ ಮುಚ್ಚಲು ಸಾಧ್ಯವಾಗದೆ ದಿವಾಳಿ ಸ್ಥಿತಿಗೆ ಬಂದಿದೆ ಎಂದು ಕಿಡಿಕಾರಿದರು.
ಯಲಹಂಕಾದ ಹಳೆನಗರ ಕೆಂಪೇಗೌಡ ವಾರ್ಡ್ 1ರಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ದೊಡ್ಡಬಳ್ಳಾಪುರ ಭಾಗದಿಂದ ಬರುತ್ತಿದ್ದ ಬಸ್ಸುಗಳನ್ನು ಮಾರ್ಗಮಧ್ಯೆ ತಡೆದು ಗುಂಡಿಗಳನ್ನು ಮುಚ್ಚುವವರೆಗೂ ಪ್ರಯಾಣ ನಡೆಸದಂತೆ ಒತ್ತಾಯಿಸಿದರು. ರಾಜ್ಯ ಸರ್ಕಾರ ಕಾಟಾಚಾರಕ್ಕೆ ಅವೈಜ್ಞಾನಿಕವಾಗಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುತ್ತಿದೆ. ಕಳಪೆ ಡಾಂಬರೀಕರಣದಿಂದಾಗಿ ಎಲ್ಲೆಂದರಲ್ಲಿ ಗುಂಡಿಗಳಿವೆ. ಪ್ರಯಾಣಿಕರು ರಸ್ತೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಇತ್ತೀಚೆಗೆ ಅನೇಕ ಸಾವುನೋವು ಸಂಭವಿಸಿರುವುದು ಇದಕ್ಕೆ ಸಾಕ್ಷಿ ಎಂದು ಶಾಸಕ ವಿಶ್ವನಾಥ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ನೇತೃತ್ವದಲ್ಲಿ ಕಠೀರವ ಸ್ಟುಡಿಯೋ ಬಳಿ ರಸ್ತೆ ತಡೆದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಸ್ತೆ ಗುಂಡಿಗಳ ಮುಂದೆ ಕುಳಿಯು ಬಾಯಿ ಬಾಯಿ ಬಡಿದುಕೊಳ್ಳುತ್ತಿರುವ ಪ್ರತಿಭಟನಾಕಾರರು, ತಾವೇ ಗುಂಡಿ ಮುಚ್ಚಿದರು. ಮಾಜಿ ಶಾಸಕ ನೇಲ ನರೇಂದ್ರ ಬಾಬು, ಉಪ ಮೇಯರ್ ಹರೀಶ್ ಸಹ ಗುಂಡಿ ಮುಚ್ಚುವ ಕೆಲಸ ಮಾಡಿದರು.
ಕಂಠೀರವ ಸ್ಟುಡಿಯೋ ರಸ್ತೆ, ಸುಮನಹಳ್ಳಿ, ನಾಗರಭಾವಿ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆಗಳು ಗುಂಡಿಮಯವಾಗಿದ್ದರೂ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.ಗುಂಡಿ ಮುಚ್ಚಿ ಜನರ ಪ್ರಾಣ ಉಳಿಸಿ, ಗುಂಡಿಗಳ ಊರು ಮಾಡಿದ ಕಾಂಗ್ರೆಸ್ ಸರ್ಕಾರ ಅಂತ ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದರು.
ಈ ವೇಳೆ ಪ್ರತಿಭಟನೆ ಪಾಲ್ಗೊಂಡಿದ್ದ ನೂರಾರು ಕಾರ್ಯಕರ್ತರು ರಸ್ತೆತಡೆ ನಡೆಸಿ ಗುಂಡಿಗಳಿಗೆ ಡಾಂಬರೀಕರಣ ಮತ್ತು ಮಣ್ಣು ಹಾಕಿ ಮುಚ್ಚಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸರ್ಕಾರದ ಬಳಿ ಗುಂಡಿಗಳನ್ನು ಮುಚ್ಚಲು ಹಣವಿಲ್ಲ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳು ಸಂಚರಿಸುವುದೆಂದರೆ ಯಮಲೋಕಕ್ಕೆ ಹೋದ ಅನುಭವವಾಗುತ್ತದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ ಎಂದರೆ ಜನರ ಪಾಲಿಗೆ ಇದು ಸತ್ತು ಹೋಗಿದೆ ಎಂದು ಕಿಡಿಕಾರಿದರು.
ಬನಶಂಕರಿಯಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಚಿಕ್ಕಪೇಟೆಯಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ಉದಯ ಗರುಡಾಚಾರ್, ಗಾಂಧಿನಗರದಲ್ಲಿ ಸಪ್ತಗಿರಿ ಗೌಡ ಹೀಗೆ 28 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪ್ರತಿಭಟನೆ ನಡೆಸಿದರು. ಬಸವನಗುಡಿ, ಗೋವಿಂದರಾಜನಗರ, ವಿಜಯನಗರ, ಬಿಟಿಎಂ ಲೇಔಟ್ ಕ್ಷೇತ್ರಗಳಲ್ಲಿ ರಸ್ತೆ ತಡೆ ನಡೆಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.
ಇಡೀ ಬೆಂಗಳೂರನ್ನು ಗುಂಡಿ ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ವಾಹನ ಸವಾರರಿಗೆ ತೊಂದರೆ ಕೊಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಬ್ರಾಂಡ್ ಬೆಂಗಳೂರು ಎಂದು ಹೇಳಿ ಬ್ಯಾಡ್ ಬೆಂಗಳೂರು ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಹಾಕಿ ಮುಚ್ಚಿಸಿ ಮುಚ್ಚಿಸಿ ಗುಂಡಿ ಮುಚ್ಚಿಸಿ ಘೋಷಣೆ ಕೂಗಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಐಜಿ ವೃತ್ತದಲ್ಲಿ ಬಿಜೆಪಿ ಶಾಸಕರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ. ಹೀಗೆ ರಾಜ್ಯದ ಎಲ್ಲಾ ಕಡೆ ಪ್ರತಿದಿನ 1 ಗಂಟೆ ರಸ್ತೆತಡೆ ನಡೆಸಿ ಅಥವಾ ಗುಂಡಿ ಬಿದ್ದಿರುವ ಜಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರು ನಿರ್ಧರಿಸಿದ್ದು, ಇದರೊಂದಿಗೆ ತಾವೇ ಗುಂಡಿ ಮುಚ್ಚುವ ಕೆಲಸವನ್ನೂ ಮಾಡಲಿದ್ದಾರೆ.
ಸರ್ಕಾರದ ಬಳಿ ಹಣ ಇಲ್ಲ ಗುಂಡಿ ನಾವೇ ಮುಚ್ಚೋಣ :
ಬೆಂಗಳೂರು,ಸೆ.24- ಪ್ರಧಾನಿ ನರೇಂದ್ರಮೋದಿ ಅವರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗುಂಡಿಗಳಿವೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಮೊದಲು ನಿಮ ಮನೆಯ ಬಾಗಿಲನ್ನು ಸರಿಪಡಿಸಿ ಕೊಳ್ಳಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪಾಪರ್ ಆಗಿದೆ, ಅವರ ಬಳಿ ಹಣ ಇಲ್ಲ. ರಸ್ತೆ ಗುಂಡಿಗಳನ್ನು ನಾವೇ ಮುಚ್ಚೋಣ, ಜನ ಸಹಕಾರ ಮಾಡಿ. ಡಿ.ಕೆ.ಶಿವಕುಮಾರ್ ಅವರೇ ಬ್ಯಾಟರಿ ತೆಗೆದುಕೊಂಡು ಫ್ಲೈಟ್ ಹತ್ತಿ ಅಮೆರಿಕಾಕ್ಕೆ ಹೋಗಿ ಟ್ರಂಪ್ ಮನೆ ಮುಂದೆ ಗುಂಡಿ ಇದ್ಯಾ ನೋಡಿ. ಮೊದಲು ನಿಮ ಮನೆ ನೋಡರಿ. ಮೋದಿ, ಟ್ರಂಪ್ ಏನು ಮಾಡುತ್ತಿದ್ದಾರೆ ಎಂದು ನೋಡಲು ನಿಮನ್ನು ಅಧಿಕಾರದಲ್ಲಿ ಇಟ್ಟಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರ ಗುಂಡಿ ಮುಚ್ಚಿಲ್ಲ ಅಂತೀರಲ್ಲಾ. ಗುಂಡಿ ಮುಚ್ಚುವುದು ತಾತ್ಕಾಲಿಕ ಅಷ್ಟೇ, ಶಾಶ್ವತ ಅಲ್ಲ ಇಡೀ ಕಾಂಗ್ರೆಸ್ ಸರ್ಕಾರ ಗುಂಡಿಗಳಲ್ಲಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಗುಂಡಿಗಳು ಮರಣ ಕೂಪ ಆಗಿವೆ. ಬೆಂಗಳೂರು ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಬೇಕಾಗಿದೆ. ನೀವು 5000 ಕೋಟಿ ಡಾಂಬರೀಕರಣ ಮಾಡಿದ್ದರೆ ಗುಂಡಿ ಯಾಕೆ ಬೀಳುತ್ತಿತ್ತು? ಎಂದು ಪ್ರಶ್ನೆ ಮಾಡಿದರು.
ನೀವು ಕಳಪೆ ಕಾಮಗಾರಿ ಮಾಡಿದ್ದೀರಿ ಅದಕ್ಕೆ ಗುಂಡಿ ಬಿದ್ದಿದೆ. ಬೆಂಗಳೂರಿನ ಎಲ್ಲಾ ರಸ್ತೆಗಳಿಗೆ ಇಂದಿನಿಂದಲೇ ಡಾಂಬರೀಕರಣ ಮಾಡಿ ಎಂದು ಆಗ್ರಹಿಸಿದರು. ಡಿಸಿಎಂ ಐಟಿ ಬಿಟಿ ಕಂಪನಿಗಳಿಗೆ ಮಾತ್ರ ಬೆಂಗಳೂರು ಬಿಟ್ಟು ಹೋಗಿ ಅಂದಿದ್ದಾರೆ. ಕಾರು, ಬೈಕ್ಗಳಲ್ಲಿ ಓಡಾಡುವವರನ್ನು ಯಾವಾಗ ಬಿಟ್ಟು ಹೋಗಿ ಅಂತೀರಾ? ನಾವು ರಜೆ ತೆಗೆದುಕೊಂಡು ಬೆಂಗಳೂರು ಬಿಟ್ಟು ಹೊರಗೆ ಹೋಗುತ್ತೇವೆ. ಆಗಲಾದರೂ ರಸ್ತೆ ರಿಪೇರಿ ಮಾಡುತ್ತೀರಾ? ಕಂಪನಿಗಳಿಗೆ ಆವಾಜ್ ಹಾಕಿದಂತೆ ಬೆಂಗಳೂರಿನ ಜನರಿಗೆ ಯಾವಾಗ ಆವಾಜ್ ಹಾಕುತ್ತೀರಾ? ಎಂದರು.
ಕಳೆದ ನಾಲ್ಕು ತಿಂಗಳಿನಿಂದ ಸಾವಿರ ಗುಂಡಿ ಮುಚ್ಚಿದ್ದೇವೆ ಎನ್ನುತ್ತಾರೆ. ಕಾಂಗ್ರೆಸ್ನವರಿಗೆ ಕೈ ಮುಗಿಯುತ್ತೇನೆ, ಪುಣ್ಯಕ್ಕೆ ಕೆಂಪೇಗೌಡರ ಕಾಲದಲ್ಲೇ ರಸ್ತೆ ಸರಿ ಮಾಡಿಲ್ಲ ಎಂದು ಹೇಳಲಿಲ್ವಲ್ಲಾ ಎಂದು ವ್ಯಂಗ್ಯವಾಡಿದರು.
ಇದು ಪಾಪರ್ ಸರ್ಕಾರ ಇಡೀ ರಿಂಗ್ ರೋಡ್ ಹದಗೆಟ್ಟು ಹೋಗಿದೆ. ಗುಂಡಿ ಮುಚ್ಚೋದಲ್ಲ, ರಸ್ತೆಗಳನ್ನೇ ಸಂಪೂರ್ಣವಾಗಿ ಸರಿಪಡಿಸಬೇಕಿದೆ. ಎರಡೂವರೆ ವರ್ಷ ಆಯ್ತು, ರಸ್ತೆಗುಂಡಿಮುಚ್ಚಲಿಲ್ಲ ಈ ಸರ್ಕಾರ. ಅದಕ್ಕೆ ನಾವೇ ರಸ್ತೆಗಿಳಿದು ಗುಂಡಿ ಮುಚ್ಚಲು ಮುಂದಾಗಿದ್ದೇವೆ ಎಂದು ಹೇಳಿದರು.
ರಸ್ತೆಗುಂಡಿಗಳು ಮರಣ ಕೂಪಗಳಾಗಿವೆ. ರಾಜ್ಯಾದ್ಯಂತ ಸಮರೋಪಾದಿಯಲ್ಲಿ ಸಚಿವರು ಪ್ರವಾಸ ಮಾಡಿ ರಸ್ತೆಗಳನ್ನು ಸರಿಪಡಿಸಬೇಕು. ಆದರೆ ಯಾವ ಸಚಿವರೂ ಜಿಲ್ಲೆಗಳಿಗೆ ಹೋಗುತ್ತಿಲ್ಲ. ಈ ಸರ್ಕಾರ 60% ಲಂಚ ಹೊಡೆದಿದೆ, ಅದಕ್ಕಾಗಿಯೇ ಗುಂಡಿ ಮುಚುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಹತ್ತಿದ ಏಣಿ ಒದ್ದಂತೆ, ಕೆಲಸ ಆದಮೇಲೆ ಬೆಲೆ ಇಲ್ಲ ಎಂಬ ಧೋರಣೆ. ಸರ್ಕಾರದ ಬಳಿ ಹಣ ಇಲ್ಲ, ಪಾಪರ್ ಆಗಿದೆ. ಸರ್ಕಾರಕ್ಕೆ ನ್ಯಾ.ನಾಗಮೋಹನದಾಸ್ ಆಯೋಗಕ್ಕೆ ಕನಿಷ್ಟ ಸವಲತ್ತು ಕೊಡುವ ಯೋಗ್ಯತೆಯೂ ಇಲ್ಲ.ಆಯೋಗಕ್ಕೆ ತಿಂಗಳಿಗೆ ಕನಿಷ್ಟ 10 ಲಕ್ಷ ರೂ. ಕೊಡುವ ಯೋಗ್ಯತೆಯೂ ಇಲ್ಲದಷ್ಟು ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಅಶೋಕ್ ಟೀಕಿಸಿದರು.