ನವದೆಹಲಿ, ಜೂ.28– ನೀಟ್ ಪರೀಕ್ಷಾ ಅಕ್ರಮದ ವಿಚಾರವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸಿದರು.ನೀಟ್ ಮತ್ತು ನೆಟ್ ಪರೀಕ್ಷಾ ಅಕ್ರಮದ ವಿಚಾರ ಪ್ರಸ್ತಾಪಿಸಿ ಪ್ರತಿಪಕ್ಷಗಳ ಸದಸ್ಯರು ವಾಗ್ವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿ ಮಾತನಾಡಿದ ಗೌಡರು, ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯಾಗುತ್ತಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ತನಿಖೆ ಪೂರ್ಣಗೊಳಿಸುವ ಹೊಣೆ ಕೇಂದ್ರ ಸರ್ಕಾರದ ಮೇಲಿದೆ. ಸರ್ಕಾರ ವರದಿ ಪಡೆಯಲಿ ಎಂದರು.
ನೀಟ್ ಪರೀಕ್ಷಾ ಅಕ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದರೆ ಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ರಾಷ್ಟ್ರಪತಿ ಅವರು ತಮ ಭಾಷಣದಲ್ಲಿ ಪರೀಕ್ಷಾ ಅಕ್ರಮದ ವಿಚಾರವನ್ನು ಉಲ್ಲೇಖಿಸಿದ್ದಾರೆ.ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.
ಪರೀಕ್ಷಾ ಅಕ್ರಮದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ. ತನಿಖಾ ವರದಿ ಬಂದ ನಂತರ ಚರ್ಚೆ ಮಾಡೋಣ.ಸದನದ ಕಾರ್ಯ ಕಲಾಪ ನಡೆಸಲು ಸಹಕಾರ ನೀಡುವಂತೆ ಪ್ರತಿಪಕ್ಷಗಳ ಸದಸ್ಯರಲ್ಲಿ ಗೌಡರು ಮನವಿ ಮಾಡಿದರು.