Sunday, September 8, 2024
Homeರಾಜ್ಯ'ಡ್ರಗ್ಸ್ ಮುಕ್ತ ಕರ್ನಾಟಕ' ಸಂಕಲ್ಪಕ್ಕೆ ಸರ್ಕಾರ ಬದ್ಧ : ಗೃಹಸಚಿವ ಪರಮೇಶ್ವರ್‌

‘ಡ್ರಗ್ಸ್ ಮುಕ್ತ ಕರ್ನಾಟಕ’ ಸಂಕಲ್ಪಕ್ಕೆ ಸರ್ಕಾರ ಬದ್ಧ : ಗೃಹಸಚಿವ ಪರಮೇಶ್ವರ್‌

ಬೆಂಗಳೂರು, ಮಾ 21- ಮಾದಕವಸ್ತು ಮುಕ್ತ ಕರ್ನಾಟಕದ ಸಂಕಲ್ಪಕ್ಕೆ ರಾಜ್ಯಸರ್ಕಾರ ಬದ್ಧವಾಗಿದೆ. ರೇವು ಪಾರ್ಟಿಯಲ್ಲಿ ಅಕ್ರಮವಾಗಿ ಡ್ರಗ್ಸ್ ಬಳಕೆಯ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಡ್ರಗ್‌ ಪೆಡ್ಲರ್‌ಗಳನ್ನು ಮಟ್ಟ ಹಾಕಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರೇವು ಪಾರ್ಟಿಯನ್ನು ಸ್ಥಳೀಯರು ಆಯೋಜಿಸಲಾಗಿದ್ದು, ಹೊರರಾಜ್ಯದವರು ಅದರಲ್ಲಿ ಭಾಗವಹಿಸಿದ್ದು, ಸಿಂಥೆಟಿಕ್‌ ಡ್ರಗ್‌್ಸ ಬಳಸಿರುವ ಬಗ್ಗೆ ಪೊಲೀಸರು ವರದಿ ಮಾಡಿದ್ದಾರೆ. ಪೊಲೀಸರು ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದು, ತನಿಖೆ ಮುಂದುವರೆದಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕರ್ನಾಟಕ ರಾಜ್ಯವನ್ನು ಮಾದಕವಸ್ತು ಮುಕ್ತವನ್ನಾಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಾವು ಈಗಾಗಲೇ ಹೇಳಿಕೆ ನೀಡಿದ್ದೇವೆ. ಅದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿ ಸೂಕ್ಷ್ಮವಾಗಿ ಕೆಲಸ ನಿರ್ವಹಿಸಲು ತಾಕೀತು ಮಾಡಲಾಗಿದೆ ಎಂದರು.

ಈಗಾಗಲೇ ಹಲವು ಕಡೆ ದಾಳಿ ಮಾಡಿ ಸಾವಿರಾರು ಕೋಟಿ ರೂ.ಗಳ ಮಾದಕವಸ್ತುಗಳನ್ನು ಹಿಡಿದು ಸುಟ್ಟುಹಾಕಲಾಗಿದೆ. ಆದರೂ ಕೂಡ ಇಂತಹ ಕೃತ್ಯಗಳು ಮರುಕಳಿಸುತ್ತಿವೆ. ಪೊಲೀಸರು ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಸಹನೆಯಿಂದಿರುವುದಿಲ್ಲ ಎಂದು ಹೇಳಿದರು.

ಎಲ್ಲೆಲ್ಲಿ ಮಾದಕವಸ್ತು ದೊರೆತಿವೆಯೋ ಅಲ್ಲೆಲ್ಲಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೊರರಾಜ್ಯದಿಂದ ಕರ್ನಾಟಕ ಪ್ರವೇಶಿಸುವ ಮಾದಕವಸ್ತುಗಳನ್ನೂ ನಿರ್ಬಂಧಿಸಲು ಇಲಾಖೆಯಲ್ಲಿರುವ ಪ್ರತ್ಯೇಕ ಘಟಕ ಕೆಲಸ ನಿರ್ವಹಿಸುತ್ತಿದೆ ಎಂದರು. ಹೈಡ್ರೋಪೋನಿಕ್‌ ಗಾಂಜಾವನ್ನು ಬಾಟಲಿಯ ನೀರಿನಲ್ಲಿಟ್ಟು ಮನೆಯ ಮೇಲ್ಛಾವಣಿ ಮೇಲೆ ಬೆಳೆಸಿಕೊಳ್ಳುತ್ತಿದ್ದಾರೆ. ಅಂತಹುದ್ದನ್ನೆಲ್ಲಾ ಹಿಡಿಯುವುದು ಕಷ್ಟದ ಕೆಲಸ. ಆದರೆ ಈ ರೀತಿ ಎಲ್ಲೆಲ್ಲಿ ಬಳಕೆಯಾಗುತ್ತಿದೆ ಎಂಬ ಮಾಹಿತಿಯನ್ನು ಕಲೆ ಹಾಕಿ ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕವಸ್ತು ಕಳ್ಳಸಾಗಾಣಿಕೆ ಮಾಡುವವರ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದರು.

ವಿದೇಶಿಯರು, ವಿದೇಶದ ವಿದ್ಯಾರ್ಥಿಗಳು ಮಾದಕವಸ್ತು ಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತವರನ್ನು ಬಂಧಿಸಿ ಸಂಬಂಧಪಟ್ಟ ದೇಶದ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿ ಗಡಿಪಾರು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ದೇಶ ಬಿಟ್ಟು ತೊಲಗಿಸುವವರೆಗೂ ನಮ ಕಸ್ಟಡಿಯಲ್ಲೇ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಇಷ್ಟೆಲ್ಲಾ ಕ್ರಮ ಕೈಗೊಂಡರೂ ಅಲ್ಲಿ, ಇಲ್ಲಿ ಸಣ್ಣ ಪ್ರಮಾಣದ ಮಾದಕವಸ್ತು ಪತ್ತೆಯಾಗುತ್ತಲೇ ಇದೆ. ಇದನ್ನು ಸಮರ್ಥವಾಗಿ ಹತ್ತಿಕ್ಕುವ ಕೆಲಸ ಮಾಡುತ್ತೇವೆ ಎಂದರು.

ಹಾಸನದ ಪೆನ್‌ಡ್ರೈವ್‌ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌‍ಪೋರ್ಟ್‌ ಅನ್ನು ರದ್ದು ಮಾಡುವಂತೆ ಎಸ್‌‍ಐಟಿಯ ಮುಖ್ಯಸ್ಥರು ನ್ಯಾಯಾಲಯದ ವಾರೆಂಟ್‌ ಆಧಾರಿತವಾಗಿ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಮೊದಲು ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಿಗೆ ಈ ವಿಚಾರವಾಗಿ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಯಾವುದೇ ಪರಿಣಾಮವಾಗಲಿಲ್ಲ. ನ್ಯಾಯಾಲಯದ ಆರೋಪಿ ವಿರುದ್ಧ ವಾರಂಟ್‌ ಜಾರಿ ಮಾಡಿದ ಆಧಾರದ ಮೇಲೆ ಪೊಲೀಸ್‌‍ ಇಲಾಖಾಧಿಕಾರಿಗಳು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯಲು ಸಾಧ್ಯವಾಗಿದೆ.

ಇದರ ಆಧಾರದ ಮೇಲೆ ಕ್ರಮ ಕೈಗೊಂಡು ರಾಜತಾಂತ್ರಿಕತೆಯ ಪಾಸ್‌‍ಪೋರ್ಟ್‌ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿರಲು ಸಾಧ್ಯವಾಗುವುದಿಲ್ಲ, ವಾಪಸ್‌‍ ಮರಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪರಮೇಶ್ವರ್‌ ಆಗ್ರಹಿಸಿದರು.

ಪ್ರಜ್ವಲ್‌ ರೇವಣ್ಣ ವಾಪಸ್‌‍ ಬಂದು ಶರಣಾಗಬೇಕು ಎಂದು ಕುಮಾರಸ್ವಾಮಿಯವರು ಮನವಿ ಮಾಡಿರುವುದು ಅವರ ಕುಟುಂಬಕ್ಕೆ ಸಂಬಂಧಪಟ್ಟ ವಿಚಾರ. ಪೊಲೀಸರು ಕಾನೂನು ರೀತಿಯ ಕ್ರಮ ಮುಂದುವರೆಸುತ್ತಾರೆ ಎಂದು ಹೇಳಿದರು.ಜೆಡಿಎಸ್‌‍ ನಾಯಕರ ಫೋನ್‌ ಟ್ಯಾಪಿಂಗ್‌ ಮಾಡಿಲ್ಲ, ಕುಮಾರಸ್ವಾಮಿಯವರ ಬಳಿ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳಿದ್ದರೆ ಕೊಡಲಿ, ಇನ್ನು ಎಲ್‌.ಆರ್‌.ಶಿವರಾಮೇಗೌಡರ ಆಡಿಯೋ ಪ್ರಕರಣದ ತನಿಖೆ ನಡೆಸುವ ಬಗ್ಗೆ ಎಸ್‌‍ಐಟಿ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸರ್ಕಾರ ಪ್ರತಿ ಹಂತದಲ್ಲೂ ಮಧ್ಯಪ್ರವೇಶಿಸಿ ಸೂಚನೆ ನೀಡುವುದಿಲ್ಲ ಎಂದರು.

ದೇವೇಗೌಡರ ಕುಟುಂಬವನ್ನು ಮುಗಿಸಲು ಕಾಂಗ್ರೆಸ್‌‍ ಸಂಚು ನಡೆಸಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ ಸರ್ಕಾರಕ್ಕೆ ಮಾಡಬೇಕಾದ ಕೆಲಸ ಸಾಕಷ್ಟಿದೆ. ಬರ ನಿರ್ವಹಣೆ, ಅಭಿವೃದ್ಧಿಯಂತಹ ಗಂಭೀರ ಕೆಲಸಗಳಿವೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್‌‍ ಕಾರ್ಯಕ್ರಮಗಳ ಬಗ್ಗೆ ಬಿಜೆಪಿಯವರಿಗೆ ಹೊಟ್ಟೆ ಉರಿ ಇದೆ. ಬಡವರ ಅಭಿವೃದ್ಧಿ ಅವರಿಗೆ ಸಹಿಸಲಾಗುತ್ತಿಲ್ಲ. ರಾಜ್ಯಸರ್ಕಾರಕ್ಕೆ ಕೇಂದ್ರದಿಂದ ಪರಿಹಾರ ಕೊಡಿಸಲು ವಿಫಲರಾಗಿರುವ ಬಿಜೆಪಿಗರು ಟೀಕೆ ಮಾಡುವ ನೈತಿಕ ಹಕ್ಕು ಹೊಂದಿಲ್ಲ, ಹೆಚ್ಚು ಸ್ಥಾನ ಗಳಿಸುವುದು ಕಾಂಗ್ರೆಸ್‌‍ನ ಹಗಲುಗನಸು ಎನ್ನುವುದಾಗಿದ್ದರೆ ಬಿಜೆಪಿಯವರೇನು ರಾತ್ರಿ ಕನಸು ಕಾಣುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.

RELATED ARTICLES

Latest News