ಬೆಳಗಾವಿ,ಡಿ.17- ರೈತರು ಕೈಗಾರಿಕಾ ಉದ್ದೇಶಗಳಿಗೆ ಜಮೀನು ನೀಡುವಾಗ ಭೂ ಪರಿಹಾರ ಬೇಡ ಎಂದರೆ ಅಂಥವರಿಗೆ ಅಭಿವೃದ್ಧಿಪಡಿಸಿದ 10781 ಚದರ ಅಡಿ ಜಮೀನನ್ನು ಸರ್ಕಾರ ನೀಡುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಧಾನಪರಿಷತ್ನಲ್ಲಿಂದು ಪ್ರಶ್ನೋತ್ತರ ಅವಧಿಯಲ್ಲಿ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ಭೂ ಸ್ವಾಧೀನ ಪ್ರಕ್ರಿಯೆ ವೇಳೆ ರೈತರಿಗೆ ಮಾರುಕಟ್ಟೆ ದರದಂತೆ ಪರಿಹಾರ ನೀಡಲಾಗುತ್ತದೆ. ಒಂದು ವೇಳೆ ಯಾರಾದರೂ ನಮಗೆ ಪರಿಹಾರ ಬೇಡ ಎಂದರೆ ನಮ ಇಲಾಖೆ ವತಿಯಿಂದ ಅಭಿವೃದ್ದಿಪಡಿಸಿದ 10781 ಚದರ ಅಡಿ ಜಮೀನು ನೀಡುತ್ತಿದ್ದೇವೆ ಎಂದರು.
ಕೆ ಐ ಎ ಡಿ ಬಿ ಭೂಮಿ ವಶಪಡಿಸಿಕೊಳ್ಳುವಾಗ ಮಧ್ಯವರ್ತಿಗಳ ಹಾವಳಿ ಇದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಭೂಮಿ ನೀಡಿದ ರೈತನಿಗೆ ಚದರ ಅಡಿ ಲೆಕ್ಕದಲ್ಲಿ ಭೂಮಿ ಕೊಡಲಾಗುತ್ತದೆ. ಇದರಿಂದ ಆತ ಕೃಷಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಭೂಮಿ ನೀಡಿದ ರೈತನಿಗೆ ಉದ್ಯಮದ ಲಾಭಾಂಶದಲ್ಲಿ ಶೇ.10ರಷ್ಟಾದರೂ ಪಾಲುನೀಡಬೇಕು. ಇಲ್ಲವೆ ರೈತನಿಗೆ ಕೈಗಾರಿಕೆ ಮಾಡಲು ಸಬ್ಸಿಡಿ ನೀಡಬೇಕು.
10 ವರ್ಷ ಬಡ್ಡಿ ರಹಿತ ಸಾಲ ನೀಡಬೇಕು. ರೈತ ಹಾಗೂ ಉದ್ಯಮಿ ಕುಳಿತು ಭೂಮಿಗೆ ದರ ನಿಗದಿ ಮಾಡಬೇಕು. ಜಾಯಿಂಟ್ ವೆಂಚರ್ ಮಾಡಬೇಕು ಎಂದು ಕೋರಿದರು. ಇದಕ್ಕೆ ಉತ್ತರಿಸಿದ ಸಚಿವ ಎಂ.ಬಿ.ಪಾಟೀಲ್, ಜಾಯಿಂಟ್ ವೆಂಚರ್ ಮಾಡಲು ಅವಕಾಶವಿಲ್ಲ. ಪ್ರತಿ ಎಕರೆಗೆ 10781 ಚದರ ಅಡಿ ಭೂಮಿ ರೈತನಿಗೆ ಕೊಡುತ್ತೇವೆ. ಎಲ್ಲ ಇಂಡಸ್ಟ್ರಿ ಲಾಭ ಆಗಲ್ಲ, ಇದರಿಂದ ಜಾಯಿಂಟ್ ವೆಂಚರ್ ಅಪಾಯ ಎಂದು ಹೇಳಿದರು.