ಬೆಂಗಳೂರು,ಅ.25- ರಾಜ್ಯ ಸರ್ಕಾರ ದೀಪಾವಳಿ ಕೊಡುಯಾಗಿ ಬಿ ಖಾತಾಯಿಂದ ಎ ಖಾತಾಗೆ ಪರಿವರ್ತನೆ ಮಾಡುವುದಾಗಿ ಹೇಳಿ ಜನರಿಗೆ ಟೋಪಿ ಹಾಕುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವತ್ತಿನ ಮಾರ್ಗಸೂಚಿ ದರದ ಮೇಲೆ ಶೇ.5ರಷ್ಟು ಪಾವತಿಸಿ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದಾಗಿ ಸರ್ಕಾರ ಹೇಳಿದೆ. ವಾಸ್ತವವಾಗಿ ಬಿಬಿಎಂಪಿ ಮುನ್ಸಿಪಾಲ್ ಕಾಯ್ದೆಯಡಿ ಎ ಖಾತಾ ಬಿ ಖಾತಾ ಎಂಬುದೇನಿಲ್ಲ. ಸಾರ್ವಜನಿಕ ಗೊಂದಲ ಉಂಟು ಮಾಡಲಾಗುತ್ತಿದೆ ಎಂದರು.
ಖಾತಾ ಪರಿವರ್ತನೆ ಹೆಸರಿನಲ್ಲಿ ಸರ್ಕಾರ ಜನರನ್ನು ದಾರಿ ತಪ್ಪಿಸಿ ಹಗಲು ದರೋಡೆ ಮಾಡಲು ಹೊರಟಿದೆ. ಇದಕ್ಕೆ ಮರಳಾಗಬೇಡಿ. ಮುಂದೆ ನಮ ಸರ್ಕಾರ ಬರಲಿದ್ದು, ಹಳೆಯ ವ್ಯವಸ್ಥೆಯನ್ನು ಜಾರಿಗೆ ತಂದು ಜನರ ಹಿತ ಕಾಪಾಡಲಿದೆ ಎಂದು ಹೇಳಿದರು.
ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಖಾತಾ ಪರಿವರ್ತನೆ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಹಗಲು ದರೋಡೆ ಮಾಡುತ್ತಿದ್ದಾರೆ. ಖಜಾನೆ ತುಂಬಿಸಲು ಈ ಯೋಜನೆಗೆ ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.
30*40 ಅಡಿಯ ನಿವೇಶನಕ್ಕೆ ಬಿ ಇಂದ ಎ ಖಾತಾಗೆ ಪರಿವರ್ತನೆ ಮಾಡಲು ಸುಮಾರು 4ರಿಂದ 5 ಲಕ್ಷ ರೂ. ಆಗುತ್ತದೆ. ಇದು ಎಚ್‌ಎಸ್‌ಆರ್‌ಬಡಾವಣೆಯಲ್ಲಿ 25 ಲಕ್ಷ ರೂ. ಆಗುತ್ತದೆ. ಈ ರೀತಿ ಜನರಿಗೆ ಹೊರೆ ಹೊರಿಸಿ ಖಜಾನೆ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.
ಎರಡು ವರ್ಷ ಕಾಯಿರಿ:
ಖಾತಾ ಪರಿವರ್ತನೆಗೆ ದುಬಾರಿ ಹಣ ಪಾವತಿಸುವ ಬದಲು ಎರಡು ವರ್ಷ ಕಾಯಿರಿ. ನಮ ಸರ್ಕಾರ ಅಧಿಕಾರಕ್ಕೆ ಬರಲಿದೆ.ಹಿಂದಿನ ವ್ಯವಸ್ಥೆಯಲ್ಲೇ ಸುಲಭವಾಗಿ ನಿಮ ಆಸ್ತಿ ದೊರೆಯಲಿದೆ. ದೀಪಾವಳಿ ಉಡುಗೊರೆಗೆ ಆಸೆ ಬಿದ್ದು ಹಾಳು ಮಾಡಿಕೊಳ್ಳಬೇಡಿ. ಮಾಲೀಕತ್ವ ಸಿಗಲಿದೆ. ಇದರ ಸವಾಲನ್ನು ಸ್ವೀಕಾರ ಮಾಡುತ್ತೇನೆ ಎಂದರು.
ಜನತಾದಳ ಸರ್ಕಾರವಿದ್ದಾಗ ಪ್ರತಿ ಚದರ ಅಡಿಗೆ 110 ರೂ. ನಿಗದಿ ಮಾಡಿ ಖಾತಾ ಮಾಡಿಕೊಡುವ ವ್ಯವಸ್ಥೆ ಜಾರಿಗೆ ತಂದಿತ್ತು. ಆಗ ಭೂ ಪರಿವರ್ತನೆ ಶುಲ್ಕ 1500 ರೂ. ಖಾತಾಗೆ 12263 ರೂ. ಪಾವತಿಸಬೇಕಿತ್ತು. 2003ರಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ತರಲಾಗಿತ್ತು. ನಾನು ಮೊದಲ ಬಾರಿಗೆ ಸಿಎಂ ಆಗಿದ್ದಾಗ ಒಂದು ಪಟ್ಟಣ ಪಂಚಾಯ್ತಿ , 7 ನಗರಸಭೆಗಳನ್ನು ಒಟ್ಟುಗೂಡಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚಿಸಲಾಯಿತು. ಆಗಿನಿಂದಲೂ ಜನರು ಹಣ ಪಾವತಿಸಿ ನೀರಿನ ಸಂಪರ್ಕವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಜಿಬಿಎ ಅಧಿಸೂಚನೆಯಲ್ಲಿ ಅತ್ಯಂತ ವೇಗವಾಗಿ ವಿಸ್ತಾರವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಬಿ ಖಾತಾ ಪ್ರದೇಶದಲ್ಲಿ ಮಳೆಯಿಂದ ಪ್ರವಾಹ, ಕಟ್ಟಡ ಕುಸಿಯುವುದನ್ನು ಉಲ್ಲೇಖಿಸಲಾಗಿದೆ. ಬಿ ಖಾತಾದಿಂದ ಎ ಖಾತೆಗೆ ಪರಿವರ್ತನೆಯಾದರೆ ಮಳೆ ನೀರಿನ ಪ್ರವಾಹ, ಕಟ್ಟಡ ಕುಸಿತ ಇಳಿಯುತ್ತದೆಯೇ ಎಂದು ವ್ಯಂಗ್ಯವಾಡಿದರು.
ಈಗಾಗಲೇ ಮಾರ್ಗಸೂಚಿ ದರ ಹಾಗೂ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಗ್ಯಾರಂಟಿ ಹೆಸರಿನಲ್ಲಿ ಲೂಟಿ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದರು.2ನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ 9 ಕೈಗಾರಿಕಾ ಕ್ಲಸ್ಟರ್‌ಗಳನ್ನು ಘೋಷಣೆ ಮಾಡಲಾಗಿತ್ತು. ಚೀನಾದೊಂದಿಗೆ ಸ್ಪರ್ಧೆ ಮಾಡಲು ಅದನ್ನು ಘೋಷಿಸಲಾಗಿತ್ತು. ಮೈತ್ರಿ ಸರ್ಕಾರ ಪತನವಾದ ನಂತರ ಆ ಕಡೆ ಗಮನವೇ ಹರಿಸಿಲ್ಲ. ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚುತ್ತಿಲ್ಲ. ಇಂಥವರ ಜೊತೆಗೆ ಬಹಿರಂಗ ಚರ್ಚೆ ಮಾಡಲಾಗುತ್ತದೆಯೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದನಾಯಕ ಸಿ.ಬಿ.ಸುರೇಶ್ ಬಾಬು,ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಟಿ.ಎನ್.ಜವರಾಯಿಗೌಡ, ವಿವೇಕಾನಂದ, ಎಸ್.ಎಲ್.ಭೋಜೇಗೌಡ,ಮಾಜಿ ವೆಂಕಟರಾವ್ ನಾಡಗೌಡ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶಿ ರಾಮೇಗೌಡ ಮೊದಲಾದವರು ಉಪಸ್ಥಿತರಿದ್ದರು.
