ಬೆಂಗಳೂರು, ಸೆ.29- ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಯ ಭೀಮಾನದಿ ಭಾಗದ ಹಲವು ಪ್ರದೇಶಗಳು ಮುಳು ಗಡೆಯಾಗಿದ್ದು, ಜನರ ಪುನರ್ ವಸತಿಗೆ ಸರ್ಕಾರ ಅವಿರತ ಪ್ರಯತ್ನ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ತಮ ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ಥ ಪ್ರದೇಶಗಳ ಡ್ರೋನ್ ವಿಡಿಯೋಗಳನ್ನು ಹಂಚಿಕೊಂಡಿರುವ ಅವರು, ಕರ್ನಾಟಕದ ಭೀಮಾ ಜಲಾಶಯ ಪ್ರದೇಶಗಳಲ್ಲಿನ ಜಿಲ್ಲೆಗಳ ಪರಿಸ್ಥಿತಿ ಸವಾಲಿನದ್ದಾಗಿದೆ. ನಿರಂತರ ಮಳೆ ಹಾಗೂ ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ, ರಸ್ತೆ ಸಂಪರ್ಕ ಕಡಿತಗೊಂಡಿವೆ ಎಂದು ತಿಳಿಸಿದ್ದಾರೆ.
ಜೀವಗಳ ರಕ್ಷಣೆ ಸರ್ಕಾರದ ಮೊದಲ ಆದ್ಯತೆ. ಸುಮಾರು 8 ಸಾವಿರ ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಆಹಾರ, ನೀರು, ವೈದ್ಯಕೀಯ ಆರೈಕೆ ಒದಗಿಸಲಾಗುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಅವರು ರಕ್ಷಣೆ ಪಡೆದಿದ್ದಾರೆ.
ಜಾನುವಾರುಗಳನ್ನು ರಕ್ಷಿಸಲು ಮತ್ತು ಜೀವನೋಪಾಯಕ್ಕೆ ಹಾನಿ ಕಡಿಮೆ ಮಾಡಲು ಎಸ್ಡಿಆರ್ಎಫ್ ಹಾಗೂ ಎಲ್ಲಾ ಇಲಾಖೆಗಳು ಹಗಲಿರುಳು ಶ್ರಮಿಸುತ್ತಿವೆ ಎಂದು ತಿಳಿಸಿದ್ದಾರೆ.
ಜನ ಜೀವನ ಸಹಜ ಸ್ಥಿತಿಗೆ ಬರುವವರೆಗೂ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿ ಅಗತ್ಯ ಸಂಪನೂಲಗಳನ್ನು ಒದಗಿಸಲಾಗುವುದು. ತೊಂದರೆಗೊಳಗಾದ ಜನರಜೊತೆ ಸರ್ಕಾರ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ಹಂಚಿಕೊಳ್ಳಲಾದ ದೃಶ್ಯಗಳಲ್ಲಿ ಭೀಮಾನದಿ ತೀರದ ಭಾಗಗಳಲ್ಲಿ ಕಂಡು ಬರುತ್ತಿರುವ ದೃಶ್ಯಗಳು ಮಳೆಯ ಹಾನಿಯ ತೀವ್ರತೆಯನ್ನು ಅನಾವರಣ ಗೊಳಿಸುತ್ತಿವೆ. ಊರಿಗೆ ಊರೇ ಮುಳುಗಡೆಯಾಗಿದೆ. ರಸ್ತೆ, ಸೇತುವೆ ಹಾಗೂ ಮೂಲ ಸೌಕರ್ಯಗಳು ಕೊಚ್ಚಿಹೋಗಿವೆ.