Sunday, May 4, 2025
Homeರಾಜ್ಯಕೆಎಎಸ್ ಅಭ್ಯರ್ಥಿಗಳ ಮೇಲೆ ಸರ್ಕಾರದ ಸೇಡು ತೀರಿಸಿಕೊಳ್ಳುತ್ತಿದೆ : ಅಶೋಕ ಆರೋಪ

ಕೆಎಎಸ್ ಅಭ್ಯರ್ಥಿಗಳ ಮೇಲೆ ಸರ್ಕಾರದ ಸೇಡು ತೀರಿಸಿಕೊಳ್ಳುತ್ತಿದೆ : ಅಶೋಕ ಆರೋಪ

Government is taking revenge on KAS candidates: Ashoka

ಬೆಂಗಳೂರು, ಮೇ 3– ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿ, ಇಂದಿನಿಂದ ಆರಂಭವಾಗಿರುವ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ಅನುಮತಿ ಪಡೆದಿದ್ದರೆ, ಅವರಿಗೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕಾಂಗ್ರೆಸ್ ಸರ್ಕಾರ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಅರ್ಜಿ ತುಂಬಲು ಯಾವ ದಾಖಲಾತಿಗಳು ಬೇಕೆನ್ನುವ ಗೊಂದಲ, ಹತ್ತಿರದಲ್ಲಿ ಒಂದು ಜೆರಾಕ್ಸ್ ಅಂಗಡಿ ಇಲ್ಲ. ಕುಡಿಯೋಕೆ ನೀರಿಲ್ಲ, ಕಾಫಿ ತಿಂಡಿಗೆ ಒಂದು ಹೋಟೆಲ್ ಇಲ್ಲ.

ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ, ಹಸುಗೂಸುಗಳಿಗೆ ಹಾಲುಣಿಸೋಕೆ ಜಾಗ ಇಲ್ಲ, ಮಧ್ಯರಾತ್ರಿ ಆದರೂ ಹಾಲ್ ಟಿಕೆಟ್ ಕೈಗೆ ಸಿಕ್ಕಿಲ್ಲ. ಬೆಳಗಾದರೆ ಪರೀಕ್ಷೆ. ಇಂತಹ ಅವಾಂತರದ ನಡುವೆ ಪಾಪ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ? ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅಂದರೆ ತಮಗೆ ಯಾಕಿಷ್ಟು ದ್ವೇಷ? ಯಾಕಿಷ್ಟು ಅಸಡ್ಡೆ? ಬಡವರ ಮಕ್ಕಳು ಮುಂದೆ ಬರಬಾರದೇ? ಎಂದು ಅವರು ಪ್ರಶ್ನಿಸಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬೇರೆ ದಾರಿ ಇಲ್ಲದೆ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಆದೇಶ ತಂದರೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ನೆಮ್ಮದಿಯಾಗಿ ಪರೀಕ್ಷೆ ಬರೆಯಲೂ ತೊಂದರೆ ಮಾಡಿದ್ದೀರಿ ಎಂದು ಅವರು ಆರೋಪಿಸಿದ್ದಾರೆ.

ನೂರಾರು ಕನಸುಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ವರ್ಷಗಟ್ಟಲೆ ತಯಾರಿ ನಡೆಸಿದ ಅಭ್ಯರ್ಥಿಗಳ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರದು ಎಂದು ಅವರು ಕಿಡಿ ಕಾರಿದ್ದಾರೆ.

RELATED ARTICLES

Latest News