Thursday, September 4, 2025
Homeರಾಜ್ಯಸರ್ಕಾರದಿಂದ ಪರಿಶಿಷ್ಟರ ಹಣ ದುರ್ಬಳಕೆ : ಅಶೋಕ್‌ ವಾಗ್ದಾಳಿ

ಸರ್ಕಾರದಿಂದ ಪರಿಶಿಷ್ಟರ ಹಣ ದುರ್ಬಳಕೆ : ಅಶೋಕ್‌ ವಾಗ್ದಾಳಿ

ಬೆಂಗಳೂರು, ಸೆ.4- ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ತಾವು ಮತ್ತು ತಮ ಪಟಾಲಂ ಇನ್ನು ಮುಂದೆ ಎಂದಿಗೂ ಸಾಮಾಜಿಕ ನ್ಯಾಯದ ಬಗ್ಗೆ ಬುರುಡೆ ಭಾಷಣ ಮಾಡಿ ಬುದ್ಧ, ಬಸವ, ಅಂಬೇಡ್ಕರರಿಗೆ ಅವಮಾನ ಮಾಡಬೇಡಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲ ತಾಣ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ದಲಿತರು, ಹಿಂದುಳಿದ ವರ್ಗಗಳ ಜನರನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡು ಮೋಸ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.

ಒಂದು ಕಡೆ ಹಿಂದುಳಿದ ವರ್ಗಗಳ ವಿವಿಧ ಅಭಿವೃದ್ಧಿ ನಿಗಮಗಳಿಗೆ ನೂರಾರು ಕೋಟಿ ಅನುದಾನ ಕಡಿತ ಮಾಡಿದ್ದೀರಿ, ಮತ್ತೊಂದು ಕಡೆ ಮೀಸಲಿಟ್ಟಿರುವ ಹಣವನ್ನು ಸರಿಯಾಗಿ ಖರ್ಚು ಮಾಡಿಲ್ಲ. ಇದೇನಾ ಸ್ವಾಮಿ ನಿಮ ಸಾಮಾಜಿಕ ನ್ಯಾಯ? ಕಾಂಗ್ರೆಸ್‌‍ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ವಿನಿಯೋಗವಾಗಬೇಕಾಗಿದ್ದ ವಾಲೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಣವನ್ನ ಲಪಟಾಯಿಸಿದ್ದಾಯ್ತು. ಎಸ್‌‍ಸಿಎಸ್‌‍ಪಿ-ಟಿಎಸ್‌‍ಪಿ ಹಣದಲ್ಲಿ ಪ್ರತಿ ವರ್ಷ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಹಣವನ್ನ ಬೇರೆಡೆ ವರ್ಗಾಯಿಸಿ ದುರ್ಬಳಕೆ ಮಾಡಿದ್ದಾಯ್ತು. ಈಗ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ನಿಗಮಗಳ ಅಹಿಂದ ನಿಗಮಗಳ ಅನುದಾನ ಖೋತಾ, ಡೋಂಗಿ ಸಮಾಜವಾದಿಗಳ ಸಾಮಾಜಿಕ ನ್ಯಾಯ ಭಾಷಣಕ್ಕೆ ಮಾತ್ರ ಸೀಮಿತ! ಸಿಎಂ ಸಿದ್ದರಾಮಯ್ಯನವರೇ, ತಮ ಸರ್ಕಾರ ಬಂದಾಗಿನಿಂದ ಕಳೆದ ಎರಡು ವರ್ಷಗಳಲ್ಲಿ ಹಿಂದುಳಿದ ಸಮುದಾಯಗಳಿಗೆ ಮಾಡಿರುವ ದೊಡ್ಡ ಉಪಕಾರದ ಬಗ್ಗೆ ಓದಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅನುದಾನದಲ್ಲಿ 90 ಕೋಟಿ ರೂ. ಅನುದಾನ ಕಡಿತ, ವಿಶ್ವಕರ್ಮ ನಿಗಮಕ್ಕೆ 12 ಕೋಟಿ ಅನುದಾನ ಕಡಿತ, ಉಪ್ಪಾರ ನಿಗಮಕ್ಕೆ 7 ಕೋಟಿ ಅನುದಾನ ಕಡಿತ, ಅಂಬಿಗರ ಚೌಡಯ್ಯ ನಿಗಮಕ್ಕೆ 16 ಕೋಟಿ ರೂ. ಕಡಿತ, ಸವಿತಾ ಸಮಾಜಕ್ಕೆ 5 ಕೋಟಿ ಅನುದಾನ ಕಡಿತ ನೋಡಿದರೆ ಪ್ರತಿ ವರ್ಷ ನೂರಾರು ಕೋಟಿ ಅನುದಾನ ಕಡಿತವಾಗಿದೆ ಎಂದು ಅವರು ಸರ್ಕಾರದ ಗಮನಸೆಳೆದಿದ್ದಾರೆ.

RELATED ARTICLES

Latest News